ಅಮರಾವತಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನ.15 ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಕೋವಿಡ್-19 ಎರಡನೇ ಅಲೆಯ ನಂತರದಲ್ಲಿ ದೇಶದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿದ್ದು, ಹೂಡಿಕೆ, ಮೂಲಸೌಕರ್ಯ ಸ್ಥಾಪನೆಗೆ ಸಂಬಂಧಿಸಿದಂತೆ, ಚರ್ಚೆ ಮಾಡಲಿದ್ದಾರೆ.
ವರ್ಚ್ಯುಯಲ್ ಮೋಡ್ ನಲ್ಲಿ ಮಧ್ಯಾಹ್ನ 3 ರಿಂದ 6 ಗಂಟೆಗೆ ಸಭೆ ನಡೆಯಲಿದೆ. ಎರಡನೇ ಅಲೆಯ ಬಳಿಕ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬಂದಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಚಟುವಟಿಕೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶದಲ್ಲಿರುವ ಆಡಳಿತಗಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಹೂಡಿಕೆದಾರರಲ್ಲಿ ಸಾಮಾನ್ಯವಾಗಿ ಸಕಾರಾತ್ಮಕತೆ ಇದ್ದು, " ಈ ಹೆಚ್ಚುತ್ತಿರುವ ಆಶಾವಾದದ ಲಾಭವನ್ನು ಪಡೆದುಕೊಂಡಲ್ಲಿ ನಾವು ರಾಜ್ಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದಾಗಿದೆ ಈ ಮೂಲಕ ಉದ್ಯೋಗ ಬೆಳವಣಿಗೆ ಹಾಗೂ ಆದಾಯದ ಮೇಲೆ ದ್ವಿಗುಣ ಪರಿಣಾಮವನ್ನು ಕಾಣಬಹುದಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ನ.15 ರ ಸಂವಾದ ರಾಜ್ಯ ನಿರ್ದಿಷ್ಟ ಆರ್ಥಿಕತೆಯ ಕೇಂದ್ರಿತವಾಗಿರಲಿದೆ. ಆರ್ಥಿಕತೆಗೆ ಸಂಬಂಧಿಸಿದ ಸವಾಲುಗಳು ಹಾಗೂ ಸಾಮರ್ಥ್ಯದ ಬಗ್ಗೆ, ಹೂಡಿಕೆ, ಮೂಲಸೌಕರ್ಯ ಬೆಳವಣಿಗೆಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ-ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಸಾಧಿಸುವುದಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಈ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.