ನವದೆಹಲಿ :ಪ್ರತಿರಕ್ಷಣೆ ಕುರಿತು ಸರಕಾರದ ಉನ್ನತ ಸಲಹಾ ಸಮಿತಿಯು ಮುಂದಿನ ಎರಡು ವಾರಗಳಲ್ಲಿ ಸಭೆ ಸೇರಲಿದ್ದು,ಚರ್ಚೆಯಾಗಲಿರುವ ಹಲವಾರು ಪ್ರಮುಖ ವಿಷಯಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿಕೆಯು ಸೇರಿದೆ.
ಭಾರತದಲ್ಲಿ ಪ್ರತಿರಕ್ಷಣೆ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ)ಯು ವಯಸ್ಕರಿಗೆ ಹೆಚ್ಚುವರಿ ಕೋವಿಡ್ ಡೋಸ್ ನೀಡುವ ಬಗ್ಗೆಯೂ ಸಮಗ್ರ ಯೋಜನೆಯನ್ನು ರೂಪಿಸಲಿದೆ ಎಂದು ಸಮಿತಿಗೆ ನಿಕಟವಾಗಿರುವ ಮೂಲಗಳು ಸೋಮವಾರ ತಿಳಿಸಿವೆ.
ಇತರ ಅನಾರೋಗ್ಯಗಳನ್ನು ಹೊಂದಿರುವ ಮಕ್ಕಳಿಗೆ ಲಸಿಕೆ ನೀಡಿಕೆಯು ಜನವರಿಯಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಮಾರ್ಚ್ ವೇಳೆಗೆ ಇತರ ಎಲ್ಲ ಮಕ್ಕಳು ಲಸಿಕೆಗೆ ಅರ್ಹರಾಗಬಹುದು ಎಂದು ಈ ಮೂಲಗಳು ಹೇಳಿವೆ.
ಬೂಸ್ಟರ್ ಡೋಸ್ ಗಳನ್ನು ನೀಡುವ ಮೂಲಕ ಹೆಚ್ಚು ಸಾಂಕ್ರಾಮಿಕವಾಗಿರುವ ಕೊರೋನವೈರಸ್ ವಿರುದ್ಧ ಬಲವಾದ ರಕ್ಷಣೆಗೆ ಕೆಲವು ದೇಶಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ವಯಸ್ಕರಿಗೆ ಹೆಚ್ಚುವರಿ ಕೋವಿಡ್ ಲಸಿಕೆ ಡೋಸ್ ಗಳನ್ನು ನೀಡುವ ವಿಷಯವು ಮಹತ್ವವನ್ನು ಪಡೆದುಕೊಂಡಿದೆ.
ಸಾಂಕ್ರಾಮಿಕ ಸ್ಥಿತಿಯನ್ನು ಅವಲಂಬಿಸಿ ಹಲವಾರು ರಾಜ್ಯಗಳಲ್ಲಿ ಶಾಲೆಗಳು ಭೌತಿಕ ತರಗತಿಗಳನ್ನು ಆರಂಭಿಸುತ್ತಿರುವುದರಿಂದ ಲಸಿಕೆಗಾಗಿ ಮಕ್ಕಳಿಗೆ ಆದ್ಯತೆಯನ್ನು ಪರಿಗಣಿಸಲಾಗುತ್ತಿದೆ.ವಯಸ್ಕರು ಈಗಾಗಲೇ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿರುವುದರಿಂದ ಎರಡನೇ ಅಲೆಯು ಭಾರತದಲ್ಲಿ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿದ್ದ ಹಿನ್ನೆಲೆಯಲ್ಲಿ ಮಕ್ಕಳು ಸಾಂಕ್ರಾಮಿಕಕ್ಕೆ ಮುಂದಿನ ಸುಲಭದ ಗುರಿಯಾಗಬಹುದು ಎಂದು ತಜ್ಞರು ಕಳವಳಗಳನ್ನು ವ್ಯಕ್ತಪಡಿಸಿದ್ದರೆ.
ಹೆಚ್ಚುವರಿ ಅಥವಾ ಬೂಸ್ಟರ್ ಡೋಸ್ ಗಳು ಅಗತ್ಯವೇ ಎಂಬ ಬಗ್ಗೆ ವಿಶ್ವಾದ್ಯಂತ ನೀತಿ ನಿರೂಪಕರು ಮತ್ತು ವಿಜ್ಞಾನಿಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ. ಅಮರಿಕ ಇತರ ಅನಾರೋಗ್ಯಗಳನ್ನು ಹೊಂದಿರುವವರು,ಹಿರಿಯ ಪ್ರಜೆಗಳು ಮತ್ತು ಇತರ ಹೆಚ್ಚಿನ ಅಪಾಯದ ಗುಂಪುಗಳಿಗೂ ಆಚೆ ಕೋವಿಡ್-19 ಬೂಸ್ಟರ್ ಡೋಸ್ ನೀಡಲು ಸಜ್ಜಾಗಿರುವ ಇತ್ತೀಚಿನ ದೇಶವಾಗಿದೆ.
ಬೂಸ್ಟರ್ ಡೋಸ್ ಗಳನ್ನು ನೀಡಲು ಇದು ಸಕಾಲವಾಗಿದೆ ಎಂದು ಹಲವಾರು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ. ಆದರೆ ಈಗಾಗಲೇ ಪಡೆದಿರುವ ಲಸಿಕೆ ಡೋಸ್ ಗಳು ಈಗಲೂ ಜನಸಾಮಾನ್ಯರಲ್ಲಿ ಕೋವಿಡ್ ತೀವ್ರತೆ ಮತ್ತು ಸಾವುಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತಿರುವುದರಿಂದ ಬೂಸ್ಟರ್ ಡೋಸ್ ಗಳ ಅಗತ್ಯದ ಬಗ್ಗೆ ಕೆಲವರು ಶಂಕೆಗಳನ್ನು ವ್ಯಕ್ತಪಡಿಸಿದ್ದಾರೆ.