ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ಮತ್ತಷ್ಟು ಕಡಿಮೆಯಾಗುತ್ತಿದೆ. ಇಂದು ಶನಿವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 11 ಸಾವಿರದ 850 ಮಂದಿಯಲ್ಲಿ ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 555 ಮಂದಿ ಮೃತಪಟ್ಟಿದ್ದಾರೆ.
ದೇಶದಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷದ 36 ಸಾವಿರದ 308 ಇದ್ದು ಕಳೆದ 274 ದಿನಗಳಲ್ಲಿಯೇ ಇದು ಅತ್ಯಂತ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 12 ಸಾವಿರದ 403 ಮಂದಿ ಕೊರೋನಾದಿಂದ ಗುಣಮುಖರಾಗುವುದರೊಂದಿಗೆ ಇದುವರಿಗೆ ಸೋಂಕಿನಿಂದ ದೇಶದಲ್ಲಿ ಗುಣಮುಖ ಹೊಂದಿದವರ ಸಂಖ್ಯೆ 3 ಕೋಟಿಯ 38 ಲಕ್ಷದ 26 ಸಾವಿರದ 483 ಆಗಿದೆ. ಒಟ್ಟು ಕೇಸಿಗಿಂತ ಸಕ್ರಿಯ ರೋಗಿಗಳ ಸಂಖ್ಯೆ ಶೇಕಡಾ 1ಕ್ಕಿಂತ ಕಡಿಮೆಯಿದ್ದು ಪ್ರಸ್ತುತ ಸಕ್ರಿಯ ರೋಗಿಗಳ ಪ್ರಮಾಣ ಶೇಕಡಾ 0.40ರಷ್ಟಿದ್ದು, ಕಳೆದ ವರ್ಷ ಮಾರ್ಚ್ ನಿಂದ ಇಲ್ಲಿಯವರೆಗೆ ಅತಿ ಕಡಿಮೆಯಾಗಿದೆ.
ಗುಣಮುಖ ಹೊಂದಿರುವವರ ಪ್ರಮಾಣ ಶೇಕಡಾ 98.26ರಷ್ಟಾಗಿದ್ದು, ಕಳೆದ ವರ್ಷ ಮಾರ್ಚ್ 2020ರ ನಂತರ ಗುಣಮುಖ ಹೊಂದುತ್ತಿರುವವರ ಸಂಖ್ಯೆ ಅತ್ಯಧಿಕವಾಗಿದೆ.
ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಕೋವಿಡ್-19 ವಿರುದ್ಧ ಹೋರಾಡಲು ಜನರಿಗೆ ನೀಡುವ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 111.40 ಕೋಟಿ ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.
ಆರೋಗ್ಯ ಇಲಾಖೆಯಿಂದ ರಾಜ್ಯಗಳಿಗೆ ಹಣ ಬಿಡುಗಡೆ: ಇನ್ನು 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 19 ರಾಜ್ಯಗಳ ಸ್ಥಳೀಯ ಸಂಸ್ಥೆಗಳಿಗೆ ಆರೋಗ್ಯ ಇಲಾಖೆ 8 ಸಾವಿರದ 453.92 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ.