ಕೋವಿಡ್ 19ನಿಂದ ಚೇತರಿಸಿಕೊಂಡವರು ನೆಮ್ಮದಿಯ ಉಸಿರು ಬಿಡುವಂತಿಲ್ಲ. ಏಕೆಂದರೆ ಕೋವಿಡ್ 19 ಬಳಿಕ ಹಲವರಿಗೆ ಹಲವು ಬಗೆಯ ಸಮಸ್ಯೆಗಳು ಕಂಡು ಬರುತ್ತಿವೆ. ಕೋವಿಡ್ 19ನಿಂದ ಚೇತರಿಸಿದ ಕೆಲ ಮಕ್ಕಳಲ್ಲಿ MIS-C ಲಕ್ಷಣಗಳು ಕಂಡು ಬರುತ್ತಿರುವುದು ಪೋಷಕರಿಗೆ ಆತಂಕ ಉಂಟು ಮಾಡುತ್ತಿದೆ. MIS-C ಎಂದರೆ ವೈದ್ಯಕೀಯ ಭಾಷೆಯಲ್ಲಿ Multisystem Inflammatory Syndrome ಎಂದು ಕರೆಯಲಾಗುವುದು.
ಇಂಥ ಸಮಸ್ಯೆ ಮೊದಲಿಗೆ 2020ರಲ್ಲಿ ಅಮೆರಿಕ ಹಾಗೂ ಯುಕೆಯಲ್ಲಿ ಕಂಡು ಬಂತು. ಭಾರತದ ಕೆಲ ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದಿದ್ದೆವು. ಶಾಲೆ ಪ್ರಾಯದ ಮಕ್ಕಳಲ್ಲಿ ಇಂಥ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು ಈ ಲಕ್ಷಣಗಳು ಕಂಡು ಬಂದರೆ ತುಂಬಾನೇ ಅಪಾಯಕಾರಿ.
MIS-C ಎಂದರೇನು, ಇದರ ಲಕ್ಷಣಗಳೇನು ಎಂದು ನೋಡೋಣ ಬನ್ನಿ: MIS-C ಲಕ್ಷಣಗಳು ಮಕ್ಕಳಲ್ಲಿ ಕಂಡು ಬರುವ ಕವಾಸಕಿ ಕಾಯಿಲೆಯನ್ನು ಹೋಲುತ್ತದೆ. ಎರಡೂ ಕಾಯಿಲೆಯಲ್ಲೂ ಉರಿಯೂತದ ಸಮಸ್ಯೆ ಉಂಟಾಗುತ್ತದೆ. ಕೋವಿಡ್ 19 ಸೋಂಕಿನಿಂದ ಚೇತರಿಸಿದ 4 ವಾರಗಳ ಬಳಿಕ ಮಕ್ಕಳಲ್ಲಿ MIS-C ಲಕ್ಷಣಗಳು ಕಂಡು ಬರುತ್ತಿದೆ. MIS-C ಕಾಯಿಲೆಯ ಲಕ್ಷಣಗಳು * ಪ್ರಾರಂಭದಲ್ಲಿ ಜ್ವರದ ಜೊತೆಗೆ ಮೈಯಲ್ಲಿ ಗುಳ್ಳೆಗಳು ಕಂಡು ಬರುವುದು * ಕಣ್ಣುಗಳು ಕೆಂಪಾಗುವುದು * ವಾಂತಿ-ಬೇಧಿ (ದಿನ ಕಳೆದಂತೆ ಪರಿಸ್ಥಿತಿ ಕೆಟ್ಟದಾಗುವುದು) * ಈ ಉರಿಯೂತ ಹೃದಯ ಹಾಗೂ ರಕ್ತ ನಾಳಗಳಿಗೆ, ಇತರ ಅಂಗಾಂಗಗಳಿಗೆ ತೊಂದರೆ ಉಂಟಾಗುವುದು. ಆದ್ದರಿಂದ ಇಂಥ ಲಕ್ಷಣಗಳು ಕಂಡು ಬಂದ ತಕ್ಷಣ ಕೂಡಲೇ ಮಕ್ಕಳ ತಜ್ಞರ ಬಳಿ ಕೊಂಡೊಯ್ಯಿರಿ.
MIS-C ಬಗ್ಗೆ ತಜ್ಞರು ಏನು ಹೇಳುತ್ತಾರೆ? * ಕೋವಿಡ್ 19 ಬಳಿಕ ಮಕ್ಕಳಲ್ಲಿ ಕಂಡು ಬರುತ್ತಿರುವ ಅಪರೂಪದ ಕಾಯಿಲೆ ಇದಾಗಿದೆ. * ಮಕ್ಕಳಲ್ಲಿ ಏನಾದರೂ ಇಂಥ ಲಕ್ಷಣಗಳು ಕಂಡು ಬಂದರೇ ಕುಡಲೇ ಮಕ್ಕಳ ತಜ್ಞರ ಬಳಿ ಕರೆತರಬೇಕು. * ಶಾಲೆ ಪ್ರಾಯದ ಮಕ್ಕಳಲ್ಲಿ ಹೆಚ್ಚಾಗಿ ಈ ರೀತಿಯ ಸಮಸ್ಯೆ ಕಂಡು ಬರುತ್ತಿದೆ. ಸಾಮಾನ್ಯವಾಗಿ 8-9 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಚಿಕ್ಕ ಮಗುವಿನಲ್ಲೂ, ಹದಿ ಹರೆಯದ ಪ್ರಾಯದವರಲ್ಲೂ ಈ ಲಕ್ಷಣಗಳು ಕಂಡು ಬರುತ್ತಿವೆ. * ಕೋವಿಡ್ 19 ಸೋಂಕು ತಗುಲಿದ 2-6 ವಾರಗಳ ಒಳಗೆ ಇಂಥ ಕಾಯಿಲೆಯ ಲಕ್ಷಣಗಳು ಕಂಡು ಬರುವುದು. * MIS-C ಕಾಯಿಲೆಯನ್ನು ಗುಣಪಡಿಸಬಹುದು. ಆದರೆ ಮಕ್ಕಳಿಗೆ ಬೇಗನೆ ಚಿಕಿತ್ಸೆ ಕೊಡಿಸಬೇಕು, ಇಲ್ಲದಿದ್ದರೆ ಅಂಗಾಂಗಗಳಿಗೆ ತೊಂದರೆಯಾಗುವುದು.
MIS-Cಗೆ ಚಿಕಿತ್ಸೆ MIS-C ಪತ್ತೆಯಾದರೆ ಅದನ್ನು ಗುಣಪಡಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಸ್ಟಿರಾಯ್ಡ್ಸ್ ಹಾಗೂ ಆ್ಯಂಟಿ ಇನ್‌ಫ್ಲೇಮಟರಿ ಡ್ರಗ್ಸ್ ಇವುಗಳನ್ನು ನೀಡಲಾಗುವುದು. ಈ ಚಿಕಿತ್ಸೆಗಳ ಮೂಲಕ ಮಕ್ಕಳ ಹೃದಯ, ಕಿಡ್ನಿ ಇತರ ಅಂಗಾಂಗಗಳಿಗೆ ಹಾನಿಯುಂಟಾಗುವುದನ್ನು ತಡೆಯಲಾಗುವುದು.
MIS-C ಹಾಗೂ ಕೋವಿಡ್ 19 ನಡುವಿನ ಸಂಬಂಧವೇನು? ಕೋವಿಡ್ 19 ತಗುಲಿದಾಗ MIS-C ಕೂಡ ಉಲ್ಭಣವಾಗುವುದು. ರೋಗ ಲಕ್ಷಣಗಳು ಇಲ್ಲದ ಕೋವಿಡ್ 19 ತಗುಲಿದ ಮಕ್ಕಳಲ್ಲಿಯೂ ಈ ಸಮಸ್ಯೆ ಕಂಡುಬರಬಹುದು. ಕೋವಿಡ್ 19 ತಗುಲಿದ ಬಳಿಕ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಏಕೆ ಕಂಡು ಬರುತ್ತದೆ ಎಂಬುವುದರ ಬಗ್ಗೆ ಅನೇಕ ಅಧ್ಯಯನಗಳನ್ನು ಮಾಡಲಾಗುತ್ತಿದೆ.