ಬೆಂಗಳೂರು: ಕೋವಿಡ್-19 ಲಸಿಕೆಯ ಮೂರನೇ ಡೋಸ್ ನ್ನು ಜನತೆಗೆ ನೀಡುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಪರಿಶೀಲನೆ ನಡೆಸುತ್ತಿರುವುದರ ಮಧ್ಯೆ ಕರ್ನಾಟಕದಲ್ಲಿ ಆರೋಗ್ಯ ವಲಯ ಕಾರ್ಯಕರ್ತರು ಮತ್ತು ವೈದ್ಯರು ಸದ್ದಿಲ್ಲದೆ 3ನೇ ಡೋಸ್ ನ್ನು ತಾವಾಗಿಯೇ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಲವು ವೈದ್ಯರು ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ಮೊದಲ ಡೋಸ್ ಪಡೆದುಕೊಂಡಿದ್ದರೆ ಎರಡನೇ ಡೋಸ್ ನ್ನು 8 ತಿಂಗಳ ಹಿಂದೆ ಪಡೆದುಕೊಂಡಿದ್ದಾರೆ. ಆದರೆ ಕೋವಿಡ್-19 ಲಸಿಕೆ ಪಡೆದವರಲ್ಲಿ ಸಹ ಸೋಂಕು ಕಾಣಿಸಿಕೊಂಡು ಐಸಿಯು ದಾಖಲಾತಿ, ಸಾವು ನೋವುಗಳು ಕಾಣಿಸಿಕೊಂಡಿರುವುದು ಸಹಜವಾಗಿ ಜನರಲ್ಲಿ ಅದರಲ್ಲೂ ವೈದ್ಯರು, ಆರೋಗ್ಯ ವಲಯ ಕಾರ್ಯಕರ್ತರಲ್ಲಿ ಆತಂಕ ಉಂಟಾಗಿದೆ.
ಕೇವಲ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳ ವೈದ್ಯರು ಸಹ ಬೂಸ್ಟರ್ ಡೋಸ್ ಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್, ಇದು ತಮ್ಮ ಗಮನಕ್ಕೆ ಬಂದಿದೆ ಎನ್ನುತ್ತಾರೆ.
ಹಲವರು ಭಯದಿಂದ ಕೋವಿಡ್ ಮೂರನೇ ಡೋಸ್ ಪಡೆಯುತ್ತಿದ್ದಾರೆ. ಕೋವಿಡ್-19 2 ಡೋಸ್ ಪಡೆದ ನಂತರ ದೇಹದಲ್ಲಿ ಪ್ರತಿಕಾಯ ಮಟ್ಟವನ್ನು ಪರೀಕ್ಷಿಸಿ ಏನಾದರೂ ಕುಂದುಕೊರತೆ ಕ್ಷೀಣಿಸುವುದು ಕಂಡುಬಂದರೆ ಮೂರನೇ ಡೋಸ್ ಗೆ ಮೊರೆ ಹೋಗುತ್ತಾರೆ ಎಂದರು.
ಎರಡನೇ ಡೋಸ್ ಪಡೆದುಕೊಳ್ಳದವರಿಂದ ಅಪಾಯ ಹೆಚ್ಚು, ಅವರಲ್ಲಿ ಸೋಂಕು ಕಾಣಿಸಿಕೊಂಡು ಕೆಲವೊಮ್ಮೆ ಐಸಿಯುಗೆ ಸಹ ದಾಖಲಾಗಬೇಕಾಗುತ್ತದೆ. ಈ ಬಗ್ಗೆ ವೈದ್ಯರಿಗೆ ಆತಂಕವುಂಟಾಗುತ್ತದೆ. ಬೂಸ್ಟರ್ ತೆಗೆದುಕೊಳ್ಳುವುದರಿಂದ ಅಪಾಯವೇನೂ ಇಲ್ಲ ಆದರೆ ಈ ಬಗ್ಗೆ ನೀತಿಯಿಲ್ಲ ಹೀಗಾಗಿ ಮೂರನೇ ಡೋಸ್ ಪಡೆಯಲು ಈಗಲೇ ಮುಂದಾಗಬಾರದು ಎಂದು ಡಾ ಸಿ ಎನ್ ಮಂಜುನಾಥ್ ಹೇಳುತ್ತಾರೆ.
ನನ್ನ ದೇಹದ ಪ್ರತಿಕಾಯವನ್ನು ಪರೀಕ್ಷಿಸಿದಾಗ ಕ್ಷೀಣಿಸತೊಡಗಿದೆ ಎನಿಸಿ ಮೂರನೇ ಡೋಸ್ ಪಡೆದುಕೊಂಡೆ ಎಂದು ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಯ ಮುಖ್ಯ ನರ್ಸ್ ಹೇಳುತ್ತಾರೆ.