ಚಂದ್ರಗ್ರಹಣ, ಸೂರ್ಯಗ್ರಹಣ ಇವೆಲ್ಲಾ ನಭೋಮಂಡಲದಲ್ಲಿ ನಡೆಯುವ ಖಗೋಳ ವಿದ್ಯಾಮಾನವಾಗಿದೆ. ಈ ನವೆಂಬರ್ 19,2021ರಂದು ಭಾಗಶಃ ಚಂದ್ರಗ್ರಹಣವಿದೆ. ಈ ಹಿಂದೆ ಮೇ 26ರಂದು ರಕ್ತ ಚಂದ್ರಗ್ರಹಣ ಸಂಭವಿಸಿತ್ತು.
ಇದೀಗ ಸಂಭವಿಸಲಿರುವ ಚಂದ್ರಗ್ರಹಣ ಈ ಶತಮಾನದಲ್ಲಿ ಈ ಹಿಂದೆ ಘಟಿಸಿರುವ ಎಲ್ಲಾ ಚಂದ್ರಗ್ರಹಣಗಿಂತ ಭಿನ್ನವಾಗಿದೆ. ಏಕೆಂದರೆ ಈ ಬಾರಿ ಸಂಭವಿಸಲಿರುವುದು ಈ ಶತಮಾನದ ದೀರ್ಘ ಚಂದ್ರಗ್ರಹಣವಾಗಿದೆ.
ಶತಮಾನದ ಸುದೀರ್ಘ ಚಂದ್ರಗ್ರಹಣ 600 ವರ್ಷಗಳಲ್ಲಿ ಬರುವ ಸುದೀರ್ಘ ಚಂದ್ರಗ್ರಹಣ ಇದಾಗಿದೆ. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ಚಂದ್ರಗ್ರಹಣ 3 ಗಂಟೆ 28 ನಿಮಿಷ, 23 ಸೆಕೆಂಡುಗಳಲ್ಲಿ ಗೋಚರಿಸಲಿದೆ. 2018ರಲ್ಲಿ 1 ಗಂಟೆ 43 ನಿಮಿಷಗಳವರೆಗೆ ಚಂದ್ರಗ್ರಹಣ ಗೋಚರಿಸಿತ್ತು. ಆದರೆ ಈ ಬಾರಿ ನಡೆಯಲಿರುವ ಗ್ರಹಣ ಈ ಶತಮಾನದ ಅತಿ ಸುದೀರ್ಘವಾದ ಚಂದ್ರಗ್ರಹಣವಾಗಿದೆ.ಚಂದ್ರಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ? ನಾಸಾ ಹೇಳಿರುವ ಪ್ರಕಾರ ಮಧ್ಯರಾತ್ರಿ 12.48ಕ್ಕೆ ಪ್ರಾರಂಭವಾಗಿ ಮುಂಜಾನೆ 4.17ಕ್ಕೆ ಮುಕ್ತಾಯವಾಗಲಿದೆ.
ಚಂದ್ರಗ್ರಹಣ ಎಲ್ಲೆಲ್ಲಿ ಕಂಡು ಬರಲಿದೆ? ನಾಸಾ ಪ್ರಕಾರ ಗ್ರಹಣವು ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕ, ಏಷ್ಯಾ, ಆಷ್ಟ್ರೇಲಿಯಾ, ಅಟ್ಲಾಂಟಿಕ್ ಸಾಗರ, ಪೆಸಿಫಿಕ್ ಸಾಗರ ಈ ಪ್ರದೇಶಗಳಲ್ಲಿ ಕಂಡು ಬರಲಿದೆ. ಭಾರತದಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ ಈ ಭಾಗಗಳಲ್ಲಿ ಕಂಡು ಬರಲಿದೆ.
ಚಂದ್ರಗ್ರಹಣ ನೋಡುವುದು ಹೇಗೆ? ಚಂದ್ರಗ್ರಹಣವನ್ನು ಎಚ್ಚರವಾಗಿದ್ದು ಅದು ಗೋಚರಿಸುವ ಸಮಯದಲ್ಲಿ ನೋಡಬಹುದು. ಮೋಡದ ಕಾರಣ ನೋಡಲು ಸಾಧ್ಯವಾಗದಿದ್ದರೆ ಆನ್‌ಲೈನ್‌ನಲ್ಲಿ ನೋಡಬಹುದು. The Virtual Telescope Projectನಲ್ಲಿ ಚಂದ್ರಗ್ರಹಣವನ್ನು ಲೈವ್‌ನಲ್ಲಿ ನೋಡಬಹುದು.
ಚಂದ್ರಗ್ರಹಣ ಎಂದರೇನು? ಚಂದ್ರಗ್ರಹಣವನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಚಂದ್ರಗ್ರಹಣವು ನಡೆಯುವುದು. ಯಾಕೆಂದರೆ ಈ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಈ ಬಾರಿ ಚಂದ್ರನ ಮೇಲೆ ಭೂಮಿಯ ನೆರಳು ಭಾಗಶಃ ಬೀಳುವುದರಿಂದ ಭಾಗಶಃ ಚಂದ್ರಹ್ರಹಣ ಉಂಟಾಗುತ್ತದೆ. ಒಂದು ವರ್ಷದಲ್ಲಿ ಹೆಚ್ಚೆಂದರೆ 3 ಬಾರಿ ಚಂದ್ರಗ್ರಹಣವಾಗುತ್ತದೆ. ಮುಂದಿನ ಚಂದ್ರಗ್ರಹಣ ಭಾರತದಲ್ಲಿ ಕಾಣ ಸಿಗುವುದು ನವೆಂಬರ್ 8, 2022ಕ್ಕೆ.