ನವದೆಹಲಿ: ಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದುಕೊಂಡ ಆರು ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಲು ಸೂಕ್ತ ಸಮಯ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಅವರು ಬುಧವಾರ ಹೇಳಿದ್ದಾರೆ.
ಮೂಗಿನ ಲಸಿಕೆ ಹೊಂದುವ ಮಹತ್ವವನ್ನು ಒತ್ತಿ ಹೇಳಿದ ಕೃಷ್ಣ ಎಲ್ಲ ಅವರು, ಝಿಕಾ ವೈರಸ್ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಕಂಪನಿ ತಮ್ಮದು ಎಂದಿದ್ದಾರೆ.
ಟೈಮ್ಸ್ ನೌ ಸಮಿಟ್ 2021 ರಲ್ಲಿ ಮಾತನಾಡಿದ ಕೃಷ್ಣ ಎಲ್ಲ ಅವರು, ಪ್ರಧಾನಿ ನರೇಂದ್ರ ಮೋದಿಯವರು ದೇಶಿಯ ಕೋವಾಕ್ಸಿನ್ ಲಸಿಕೆಯನ್ನು ಪಡೆದುಕೊಂಡಿರುವುದು ಭಾರತೀಯ ವಿಜ್ಞಾನದ ಮೇಲೆ ವಿಶ್ವಾಸವನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ.
ವಿಶ್ವದಾದ್ಯಂತ ನೇಸಲ್ ಲಸಿಕೆ ಬಗ್ಗೆ ಗಮನಹರಿಸಲಾಗುತ್ತಿದೆ. ಸೋಂಕು ಹರಡುವಿಕೆ ತಡೆಗೆ ಅದೊಂದೇ ಸೂಕ್ತ ಮಾರ್ಗವಾಗಿದ್ದು, ಭಾರತ್ ಬಯೋಟೆಕ್ ಸಹ ನೇಸಲ್ ಲಸಿಕೆ ತಯಾರಿಕೆಗೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
‘ನಾವು ನೇಸಲ್ ಕೋವಿಡ್ ಲಸಿಕೆಯನ್ನು ಬಿಡುಗಡೆ ಮಾಡಲಿದ್ದು, ಮೊದಲ ಡೋಸ್ ಆಗಿ ಕೋವ್ಯಾಕ್ಸಿನ್ ಲಸಿಕೆ ಮತ್ತು ಎರಡನೇ ಡೋಸ್ ಆಗಿ ನೇಸಲ್ ಲಸಿಕೆ ನೀಡಲು ಚಿಂತಿಸುತ್ತಿದ್ದೇವೆ. ನೇಸಲ್ ಲಸಿಕೆಯು ವೈಜ್ಞಾನಿಕವಾಗಿ ಅತ್ಯಂತ ಮುಖ್ಯವಾದುದ್ದಾಗಿದ್ದು, ಅದರಿಂದ ಸೋಂಕಿನ ಹರಡುವಿಕೆ ತಡೆಯಬಹುದಾಗಿದೆ’ಎಂದು ಅವರು ಹೇಳಿದ್ದಾರೆ.