ಜಾರ್ಖಂಡ್: ರಾಂಚಿಯಲ್ಲಿಂದು ನಡೆದ ಭಾರತ- ನ್ಯೂಜಿಲೆಂಡ್ ನಡುವಣ ಟಿ-20 ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಆರಂಭಿಕ ಆಟಗಾರರಾದ ಕೆ.ಎಲ್. ರಾಹುಲ್ 65 ಮತ್ತು ನಾಯಕ ರೋಹಿತ್ ಶರ್ಮಾ 55 ರನ್ ಗಳಿಸಿ ಉತ್ತಮ ಕೊಡುಗೆ ನೀಡಿದರು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಆರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.ಕಿವೀಸ್ ಪರ ಮಾರ್ಟಿನ್ ಗಪ್ಟಿಲ್ 31, ಮಿಚ್ಚೆಲ್ 31, ಮಾರ್ಕ್ ಚಾಪ್ ಮನ್ 21, ಗ್ಲೇನ್ ಫಿಲ್ಲಿಪ್ಸ್ 34, ಟೀಮ್ ಸೌಥಿ 13 ರನ್ ಗಳಿಸಿದರು. ಇನ್ನೂ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲಲಿಲ್ಲ. ಭಾರತದ ಪರ ಆರ್ .ಅಶ್ವಿನ್ 2, ಆಕ್ಸರ್ ಪಟೇಲ್ ಹಾಗೂ ಭುವನೇಶ್ವರ್ ಕುಮಾರ್ ತಲಾ ವಿಕೆಟ್ ಪಡೆದರು.
ಸವಾಲಿನ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ರಾಹುಲ್ ಉತ್ತಮ ಆರಂಭ ನೀಡಿದರು. ರೋಹಿತ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ, ರಾಹುಲ್ ಆಕ್ರಮಣಕಾರಿ ಆಟದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಸತತ ಐದನೇ ಪಂದ್ಯದಲ್ಲಿ ಮೊದಲ ವಿಕೆಟ್ ಗೆ ಅರ್ಧ ಶತಕದ ಜೊತೆಯಾಟ ಕಟ್ಟಿದ್ದರು.
ಈ ಮಧ್ಯೆ ಉತ್ತಮವಾಗಿ ಆಡುತ್ತಿದ್ದ ರಾಹುಲ್ ವಿಕೆಟ್ ಒಪ್ಪಿಸಿದರು. 49 ಎಸೆತಗಳನ್ನು ಎದುರಿಸಿದ ರಾಹುಲ್ 6 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 65 ರನ್ ಗಳಿಸಿದರು. ರೋಹಿತ್ 35 ಎಸೆತಗಳಲ್ಲಿ ಅರ್ಧ ಶತಕದ ಸಾಧನೆ ಮಾಡಿದರು. ಇದು ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ರೋಹಿತ್ ಮಾಡಿದ 25ನೇ ಅರ್ಧ ಶತಕವಾಗಿದೆ. ಆದರೆ, ಗೆಲುವಿನ ಆಂಚಿನಲ್ಲಿ ರೋಹಿತ್ ವಿಕೆಟ್ ಪತನವಾಯಿತು.
ರೋಹಿತ್ ಐದು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 55 ರನ್ ಗಳಿಸಿದರು. ಅಂತಿಮವಾಗಿ ವೆಂಕಟೇಶ್ ಅಯ್ಯರ್ ಅವರ 12 ಹಾಗೂ ರಿಷಭ್ ಪಂತ್ ಅವರ 12 ರನ್ ಗಳ ನೆರವಿನಿಂದ ಭಾರತ ಇನ್ನೂ 16 ಎಸೆತ ಬಾಕಿ ಇರುವಾಗಲೇ 17.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕಿವೀಸ್ ಪರ ನಾಯಕ ಟಿಮ್ ಸೌಥಿ ಮೂರು ವಿಕೆಟ್ ಪಡೆದರು.