ವಡೋದರಾ: 2002ರಲ್ಲಿ ನಡೆದಿದ್ದ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಗುಜರಾತಿನ ವಡೋದರಾದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಯೊಬ್ಬ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ವಡೋದರಾದ ಎಸ್ ಎಸ್ ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 61 ವರ್ಷದ ಬಿಲಾಲ್ ಇಸ್ಮಾಯಿಲ್ ಅಬ್ದುಲ್ ಮಜೀದ್ ಅಥವಾ ಹಾಜಿ ಬಿಲಾಳ್ ಶುಕ್ರವಾರ, ಆರೋಗ್ಯ ಸಮಸ್ಯೆಯಿಂದಾಗಿ ಮೃತಪಟ್ಟಿರುವುದಾಗಿ ಸಹಾಯಕ ಪೊಲೀಸ್ ಆಯುಕ್ತ ಎ.ವಿ. ರಾಜ್ಗೋರ್ ಹೇಳಿದ್ದಾರೆ.
ಕಳೆದ ಮೂರು- ನಾಲ್ಕು ವರ್ಷಗಳಲ್ಲಿಂದ ಬಿಲಾಲ್ ಆರೋಗ್ಯ ಸರಿಯಾಗಿರಲಿಲ್ಲ, ಆತನ ಆರೋಗ್ಯ ಕ್ಷೀಣಿಸಿದ ನಂತರ ನವೆಂಬರ್ 22 ರಂದು ಜೈಲಿನಿಂದ ಆಸ್ಪತ್ರೆಗೆ ಆತನನ್ನು ಸ್ಥಳಾಂತರಿಸಲಾಗಿತ್ತು. 2002, ಫೆಬ್ರವರಿ 27 ರಂದು ಗೋದ್ರಾದಲ್ಲಿ ಅಯೋಧ್ಯೆಯಿಂದ ಕರ ಸೇವಕರನ್ನು ಕರೆದೊಯ್ಯುತ್ತಿದ್ದ ಸಬರಮತಿ ಎಕ್ಸ್ ಪ್ರೆಸ್ ಗೆ 6 ಕೋಚ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜೀವವಾಧಿ ಶಿಕ್ಷೆಗೆ ಗುರಿಯಾದ 11 ಅಪರಾಧಿಗಳಲ್ಲಿ ಬಿಲಾಲ್ ಕೂಡಾ ಒಬ್ಬನಾಗಿದ್ದಾನೆ.
ಈ ದುರಂತದಲ್ಲಿ 59 ಜನರು ಹತ್ಯೆಯಾಗಿದ್ದರು. ರಾಜ್ಯಾದ್ಯಂತ ತೀವ್ರ ಹಿಂಸಾಚಾರ ಭುಗಿಲೆದ್ದಿತ್ತು. ಬಿಲಾಲ್ ಮತ್ತಿತರ 10 ಮಂದಿಗೆ 2011ರಲ್ಲಿ ಎಸ್ ಐಟಿ ಕೋರ್ಟ್ ಮರಣ ದಂಡನೆ ನೀಡಿತ್ತು. ಆದಾಗ್ಯೂ, ಅಕ್ಟೋಬರ್ 2017ರಲ್ಲಿ ಗುಜರಾತ್ ಹೈಕೋರ್ಟ್ ಅವರ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಾಯಿಸಿತ್ತು. ಗೋದ್ರಾ ರೈಲು ಹತ್ಯಾಕಾಂಡ ಗುಜರಾತ್ ರಾಜ್ಯಾದ್ಯಂತ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 1 ಸಾವಿರ ಮಂದಿಯ ಹತ್ಯೆಯಾಗಿತ್ತು.