ಪಾಟ್ನಾ: 2013ರಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಒಂಬತ್ತು ಅಪರಾಧಿಗಳ ಪೈಕಿ ನಾಲ್ವರಿಗೆ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ವಿಶೇಷ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ.
ಕಳೆದ ವಾರ ನ್ಯಾಯಾಲಯವು 10 ಆರೋಪಿಗಳ ಪೈಕಿ ಒಂಬತ್ತು ಆರೋಪಿಗಳಾದ ಹೈದರ್ ಅಲಿ ಅಲಿಯಾಸ್ 'ಬ್ಲ್ಯಾಕ್ ಬ್ಯೂಟಿ', ನಮನ್ ಅನ್ಸಾರಿ, ಮುಜಿಬುಲ್ಲಾ ಅನ್ಸಾರಿ, ಇಮ್ತಿಯಾಜ್ ಆಲಂ, ಅಹ್ಮದ್ ಹುಸೇನ್, ಫಿರೋಜ್ ಅಸ್ಲಾಂ, ಇಮ್ತಿಯಾಜ್ ಅನ್ಸಾರಿ, ಇಫ್ತಿಕರ್ ಆಲಂ ಮತ್ತು ಅಜರುದ್ದೀನ್ ಖುರೇಷಿ ದೋಷಿಗಳೆಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.
ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಮೂರ್ತಿ ಗುರ್ವಿಂದರ್ ಸಿಂಗ್ ಅವರು, ನಾಲ್ವರು ಅಪರಾಧಿಗಳಿಗೆ ಮರಣದಂಡನೆ, ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಇಬ್ಬರು ಅಪರಾಧಿಗಳಿಗೆ 10 ವರ್ಷ ಜೈಲು ಮತ್ತು ಒಬ್ಬ ಅಪರಾಧಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.
2013ರ ಅಕ್ಟೋಬರ್ 7ರಂದು ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ್ಯಾಲಿ ವೇಳೆ ಪಾಟ್ನಾ ರೈಲು ನಿಲ್ದಾಣದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 6 ಜನ ಸಾವನ್ನಪ್ಪಿ, 90ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ಆದರೂ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರದ ರ್ಯಾಲಿಯನ್ನು ಮುಂದುವರೆಸಿದ್ದರು.
ಈ ಬಾಂಬ್ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತಿರಲಿಲ್ಲ. ಬಳಿಕ ಎನ್ಐಎ ಈ ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕೊಂಡು 2014ರಲ್ಲಿ 11 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.