ನವದೆಹಲಿ: ಫ್ರೆಂಚ್ ನ ತನಿಖಾ ಪತ್ರಿಕೆ ಮೀಡಿಯಾಪಾರ್ಟ್ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಹತ್ವದ ವರದಿಯನ್ನು ಪ್ರಕಟಿಸಿದೆ.
ಭಾರತದೊಂದಿಗೆ ರಾಫೆಲ್ ಒಪ್ಪಂದವನ್ನು ಯಶಸ್ವಿಗೊಳಿಸಿಕೊಳ್ಳುವುದಕ್ಕಾಗಿ ಡಸಾಲ್ಟ್ ಏವಿಯೇಷನ್ ಕಂಪನಿ 7.5 ಮಿಲಿಯನ್ ಯುರೋಗಳನ್ನು ಮಧ್ಯವರ್ತಿಯೋರ್ವನಿಗೆ ಕಮಿಷನ್ ರೂಪದಲ್ಲಿ ನೀಡಲು ಅನುವು ಮಾಡಿಕೊಡುವುದಕ್ಕಾಗಿ ನಕಲಿ ಇನ್ವಾಯ್ಸ್ (ಸರಕುಪಟ್ಟಿ) ಗಳನ್ನು ತಯಾರಿಸಲಾಗಿತ್ತು ಎಂದು ಪತ್ರಿಕೆ ಹೇಳಿದೆ.
36 ರಾಫೆಲ್ ಫೈಟರ್ ಜೆಟ್ ಗಳನ್ನು ಭಾರತಕ್ಕೆ ಪೂರೈಕೆ ಮಾಡುವುದಕ್ಕಾಗಿ 59,000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದದಲ್ಲಿ ಹಗರಣದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ತನಿಖೆ ನಡೆಸಲು ಫ್ರೆಂಚ್ ನ್ಯಾಯಾಧೀಶರನ್ನು ನೇಮಕ ಮಾಡಿರುವುದರ ಬಗ್ಗೆ ಮೀಡಿಯಾಪಾರ್ಟ್ ಜುಲೈ ನಲ್ಲಿ ವರದಿ ಪ್ರಕಟಿಸಿತ್ತು.
ಮಧ್ಯವರ್ತಿಗೆ ಹಣ ನೀಡಿರುವ ಸಂಬಂಧ ದಾಖಲೆಗಳಿದ್ದರೂ ಸಹ ಭಾರತದ ತನಿಖಾ ಸಂಸ್ಥೆಗಳು ಅದನ್ನು ಪರಿಶೀಲನೆ ಮಾಡಲಿಲ್ಲ ಎಂದು ಮಾಧ್ಯಮ ಆರೋಪಿಸಿದೆ.
ಈ ಹಗರಣದಲ್ಲಿ ವಿದೇಶಿ ಕಂಪನಿಗಳು, ಅನುಮಾನಾಸ್ಪದ ಗುತ್ತಿಗೆಗಳು, ನಕಲಿ ಇನ್ವಾಯ್ಸ್ ಗಳು ಒಳಗೊಂಡಿವೆ. ಭಾರತದ ಫೆಡರಲ್ ಪೊಲೀಸ್ ಪಡೆ, ಸಿಬಿಐ, ಇಡಿ ಅಧಿಕಾರಿಗಳಿಗೆ ಡಸಾಲ್ಟ್ ಸಂಸ್ಥೆ ಗೌಪ್ಯವಾಗಿ ಮಧ್ಯವರ್ತಿ ಸುಷೇನ್ ಗುಪ್ತ ಎಂಬಾತನಿಗೆ 7.5 ಮಿಲಿಯನ್ ಯುರೋಗಳಷ್ಟು ಕಮಿಷನ್ ನೀಡಿರುವುದಕ್ಕೆ ಸಂಬಂಧಿಸಿದಂತೆ 2018 ರ ಅಕ್ಟೋಬರ್ ನಿಂದಲೇ ದಾಖಲೆಗಳು ಸಿಕ್ಕಿವೆ. ಆದರೆ ತನಿಖಾ ಸಂಸ್ಥೆಗಳು ಅವುಗಳನ್ನು ಪರಿಶೀಲನೆ ಮಾಡಿ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಮಾಧ್ಯಮ ವರದಿಯಲ್ಲಿ ಆರೋಪಿಸಲಾಗಿದೆ.