ನವದೆಹಲಿ: ಪ್ರಾದೇಶಿಕ ಪಕ್ಷಗಳು 2019-20ರಲ್ಲಿ 445.774 ಕೋಟಿ ರೂ.ಗಳನ್ನು ಅಜ್ಞಾತ ಮೂಲಗಳಿಂದ ಸಂಗ್ರಹಿಸಿವೆ. ಇದು ಅವರ ಒಟ್ಟು ಆದಾಯದ ಶೇಕಡಾ 55.50 ರಷ್ಟು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ತನ್ನ ಹೊಸ ವರದಿಯಲ್ಲಿ ತಿಳಿಸಿದೆ.
ಇದರಲ್ಲಿ ಶೇಕಡಾ 95.616 ಅಥವಾ 426.233 ಕೋಟಿ ರೂಪಾಯಿ ಚುನಾವಣಾ ಬಾಂಡ್‌ಗಳಿಂದ ಬಂದಿದ್ದು, ಪ್ರಾದೇಶಿಕ ಪಕ್ಷಗಳು ಸ್ವಯಂಪ್ರೇರಿತ ಕೊಡುಗೆಗಳಿಂದ 4.976 ಕೋಟಿ ರೂಪಾಯಿ ಸಂಗ್ರಹಿಸಿವೆ ಎಂದು ಎಡಿಆರ್ ವರದಿ ಹೇಳಿದೆ.
ಅವರ ಆದಾಯ ತೆರಿಗೆ ರಿಟರ್ನ್ಸ್ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ(ಇಸಿಐ) ಸಲ್ಲಿಸಿದ ದೇಣಿಗೆ ಕುರಿತ ಮಾಹಿತಿಯ ವಿಶ್ಲೇಷಣೆಯಲ್ಲಿ ಪ್ರಾದೇಶಿಕ ಪಕ್ಷಗಳು ದೇಣಿಗೆಯ ಮೂಲ ತಿಳಿಸದಿರುವುದು ಸ್ಪಷ್ಟವಾಗಿದೆ.
ಪ್ರಸ್ತುತ, ರಾಜಕೀಯ ಪಕ್ಷಗಳು 20,000 ರೂ.ಗಿಂತ ಕಡಿಮೆ ನೀಡುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಹೆಸರನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಪರಿಣಾಮವಾಗಿ, ಗಣನೀಯ ಪ್ರಮಾಣದ ಹಣವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಮತ್ತು ಅದು 'ಅಜ್ಞಾತ' ಮೂಲಗಳಿಂದ ಬಂದಿದೆ," ಎಂದು ವರದಿ ಹೇಳಿದೆ.
'ಅಜ್ಞಾತ' ಮೂಲಗಳಿಂದ ದೇಣಿಗೆ ಪಡೆದ ಪ್ರಾದೇಶಿಕ ಪಕ್ಷಗಳ ಪಟ್ಟಿಯಲ್ಲಿ ಟಿಆರ್‌ಎಸ್ ಮುಂದಿದ್ದು, 89.158 ಕೋಟಿ ರೂ. ಗಳಿಸಿದೆ. ಟಿಡಿಪಿ 81.694 ಕೋಟಿ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ವೈಎಸ್ಆರ್ ಕಾಂಗ್ರೆಸ್ ಪಕ್ಷವು 74.75 ಕೋಟಿ ರೂಪಾಯಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಿಜೆಡಿ(50.586 ಕೋಟಿ ರೂ.) ಮತ್ತು ಡಿಎಂಕೆ (ರೂ. 45.50 ಕೋಟಿ) ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ.