ನವದೆಹಲಿ: ಕಳೆದ ವರ್ಷ ದೇಶದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳುತ್ತವೆ.
'2020ರಲ್ಲಿ 11,396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಸಂಖ್ಯೆಗೆ (9,613) ಹೋಲಿಸಿದರೆ, ಇಂಥ ಸಾವಿನ ಪ್ರಮಾಣದಲ್ಲಿ ಶೇ 18ರಷ್ಟು ಹೆಚ್ಚಳ ಕಂಡುಬಂದಂತಾಗಿದೆ. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ (9,413) ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಸಂಖ್ಯೆಯಲ್ಲಿ ಶೇ 21ರಷ್ಟು ಹೆಚ್ಚಳ ಕಂಡುಬಂದಿದೆ ಎಂಬ ಕಳವಳಕಾರಿ ಮಾಹಿತಿ ಈ ಅಂಕಿ-ಅಂಶಗಳಿಂದ ಗೊತ್ತಾಗುತ್ತದೆ.
'ಕಳೆದ ವರ್ಷ ಬಾಧಿಸಿದ ಕೋವಿಡ್-19 ಪಿಡುಗು ಇಂತಹ ವಿದ್ಯಮಾನಕ್ಕೆ ಕಾರಣ. ಕೋವಿಡ್‌ನಿಂದಾಗಿ ಮಕ್ಕಳು ಮಾನಸಿಕವಾಗಿ ಹೆಚ್ಚು ಆಘಾತ ಅನುಭವಿಸಿದರು. ಈ ಆಘಾತವೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುವ ಸಾಧ್ಯತೆಗಳು ಹೆಚ್ಚು' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೌಟುಂಬಿಕ ಸಮಸ್ಯೆಗಳು, ಪ್ರೇಮ ವೈಫಲ್ಯ, ಅನಾರೋಗ್ಯ ಕಾರಣಗಳಿಂದಾಗಿಯೂ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4,006 ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಕೌಟುಂಬಿಕ ಸಮಸ್ಯೆಗಳು ಕಾರಣವಾಗಿದ್ದರೆ, ಪ್ರೇಮ ವೈಫಲ್ಯ ಹಾಗೂ ಅನಾರೋಗ್ಯ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಸಂಖ್ಯೆ ಕ್ರಮವಾಗಿ 1,337 ಹಾಗೂ 1,327 ಎಂದು ಎನ್‌ಸಿಆರ್‌ಬಿ ವರದಿ ಹೇಳುತ್ತದೆ.
'ಕೋವಿಡ್ ಪಿಡುಗು ಹಾಗೂ ಈ ಕಾರಣದಿಂದ ಶಾಲೆಗಳು ಮುಚ್ಚಿದವು. ಮನೆಯ ಹಿರಿಯರಲ್ಲಿ ಸಾಮಾಜಿಕವಾಗಿ ಪ್ರತ್ಯೇಕಗೊಂಡ ಭಾವನೆ ಹಾಗೂ ಆತಂಕ ಮನೆ ಮಾಡಿದವು. ಈ ಅಂಶಗಳು ಸಹ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದವು' ಎಂದು 'ಚೈಲ್ಡ್ ಪ್ರೊಟೆಕ್ಷನ್-ಸೇವ್ ದಿ ಚಿಲ್ರನ್' ಸಂಸ್ಥೆಯ ಉಪನಿರ್ದೇಶಕ ಪ್ರಭಾತ್‌ಕುಮಾರ್ ಹೇಳಿದರು.