ಮುಂಬೈ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಸೋಮವಾರ 2022ನೇ ಸಾಲಿನ ಹಜ್ ಪ್ರಕ್ರಿಯೆಯನ್ನು ಘೋಷಿಸಿದ್ದು, ಇದರೊಂದಿಗೆ ಹಜ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಇದು ಪ್ರತಿಶತ 100ರಷ್ಟು ಡಿಜಿಟಲ್ ವ್ಯವಹಾರವಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು 2022 ಜನವರಿ 31ಕೊನೆಯ ದಿನಾಂಕವಾಗಿದೆ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಹೇಳಿದ್ದಾರೆ.
ಭಾರತೀಯ ಹಜ್ ಯಾತ್ರಿಕರು ಸ್ಥಳೀಯ ಉತ್ಪನ್ನಗಳೊಂದಿಗೆ ಅಲ್ಲಿಗೆ ಹೋಗುತ್ತಾರೆ. ಹಜ್ ಯಾತ್ರಿಕರು ಇದುವರೆಗೆ ಸೌದಿ ಅರೇಬಿಯಾದಲ್ಲಿ ಬೆಡ್ ಶೀಟ್‌ಗಳು, ದಿಂಬುಗಳು, ಟವೆಲ್‌ಗಳು, ಛತ್ರಿಗಳು ಮತ್ತು ಇತರ ವಸ್ತುಗಳನ್ನು ವಿದೇಶಿ ಕರೆನ್ಸಿಯಲ್ಲಿ ಖರೀದಿಸುತ್ತಿದ್ದರು. ಆದರೆ ಈ ಬಾರಿ ಹೆಚ್ಚಿನ ಸರಕುಗಳನ್ನು ಭಾರತೀಯ ಕರೆನ್ಸಿಯಲ್ಲಿ ಭಾರತದಲ್ಲಿ ಖರೀದಿಸಲಾಗುತ್ತದೆ ಎಂದು ನಖ್ವಿ ತಿಳಿಸಿದ್ದಾರೆ.
ಈ ಸರಕುಗಳು ಸೌದಿ ಅರೇಬಿಯಾದಲ್ಲಿ ಅವರ ವೆಚ್ಚಕ್ಕೆ ಹೋಲಿಸಿದರೆ ಸುಮಾರು ಶೇ. 50 ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತವೆ ಎಂದಿದ್ದಾರೆ.
"ಕೋವಿಡ್ ಪಿಡುಗು ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರ್ಕಾರ ಮತ್ತು ಭಾರತ ಸರ್ಕಾರವು ನೀಡಬೇಕಾದ ಅಗತ್ಯ ಮಾರ್ಗಸೂಚಿಗಳ ಪ್ರಕಾರ ಸಂಪೂರ್ಣ ಹಜ್ 2022 ಪ್ರಕ್ರಿಯೆಯು ನಡೆಯಲಿದೆ ಎಂದು ಅವರು ಹೇಳಿದ್ದಾರೆ.