ಅಬುಧಾಬಿ: ಅಬುಧಾಬಿಯಲ್ಲಿ ನಡೆದ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಎದುರಾಳಿ ತಂಡದ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ್ದು, ಫೈನಲ್ಸ್ ಪ್ರವೇಶಿಸಿದೆ.
ಮೊದಲ ಸೆಮಿಫೈನಲ್ಸ್ ಪಂದ್ಯ ಇದಾಗಿದ್ದು, ಟಾಸ್ ನಲ್ಲಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲ್ಯಾಂಡ್, ಇಂಗ್ಲೆಂಡ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 166-4 ರನ್ ಗಳಿಗೆ ಕಟ್ಟಿಹಾಕಿತು.
ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ (24 ಎಸೆತಗಳಲ್ಲಿ 29 ರನ್) ಉತ್ತಮ ಆರಂಭ ನೀಡಲು ಯತ್ನಿಸಿದರಾದರೂ ಜೊತೆಯಾಟಗಾರ ಜಾನಿ ಬೈರ್ಸ್ಟೋವ್ (17 ಎಸೆತಗಳಲ್ಲಿ 13 ರನ್) ಬೇಗ ವಿಕೆಟ್ ಒಪ್ಪಿಸಿದ ಪರಿಣಾಮ ಉತ್ತಮ ಜೊತೆಯಾಟ ಕಟ್ಟುವಲ್ಲಿ ಆರಂಭಿಕ ಆಟಗಾರರು ವಿಫಲರಾದರು.
ಬಳಿಕ ಮೂರನೇ ವಿಕೆಟ್ ಗೆ ಜೊತೆಯಾಟ ಆಡಿದ ಡೇವಿಡ್ ಮಲನ್ (30 ಎಸೆತಗಳಲ್ಲಿ 42 ರನ್) ಮೊಯೀನ್ ಅಲಿ 37 ಎಸೆತಗಳಲ್ಲಿ 51ರನ್) ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.
4 ವಿಕೆಟ್ ಗಳ ನಷ್ಟಕ್ಕೆ 166 ರನ್ ಗಳಿಸಿದ ಇಂಗ್ಲೆಂಡ್ ತಂಡದ ಬೌಲರ್ ಗಳು ಆರಂಭದಲ್ಲೇ ನ್ಯೂಜಿಲ್ಯಾಂಡ್ ಓಪನರ್ ಮಾರ್ಟಿನ್ ಗಪ್ಟಿಲ್ (3 ಎಸೆತಗಳಲ್ಲಿ 4 ರನ್) ವಿಕೆಟ್ ಕಬಳಿಸುವ ಮೂಲಕ ಆರಂಭಿಕ ಆಘಾತ ನೀಡಿ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿತಾದರೂ ಅದು ಹೆಚ್ಚು ಕಾಲ ಮುಂದುವರೆಯಲಿಲ್ಲ.
ಡೇರಿಲ್ ಮಿಚೆಲ್ ಅಜೇಯ 72 ರನ್ (42 ಎಸೆತಗಳಲ್ಲಿ) ಗಳ ಮಿಂಚಿನ ಆಟದ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ಕರೆದೊಯ್ದರು. ಮಿಚೆಲ್ ಗೆ ಡೆವೊನ್ ಕಾನ್ವೇ ಉತ್ತಮ ಜೊತೆಯಾಗಿ 38 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು.
ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 36 ರನ್ ನೀಡಿ 2 ವಿಕೆಟ್ ಗಳಿಸಿದರು, ಒಂದು ಮೇಡಿನ್ ಓವರ್ ಮಾಡಿದರು. ಆದಿಲ್ ರಶೀದ್ 39 ರನ್ ನೀಡಿ ಒಂದು ವಿಕೆಟ್ ಗಳಿಸಿದರೆ, ಲಿಯಾಮ್ ಲಿವಿಂಗ್ಸ್ಟೋನ್ 22 ರನ್ ನೀಡಿ 2 ವಿಕೆಟ್ ಗಳಿಸುವ ಮೂಲಕ ಉತ್ತಮ ಬೌಲರ್ ಎನಿಸಿದರು.
ಇಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಆಸ್ಟ್ರೇಲಿಯಾ-ಪಾಕಿಸ್ತಾನ ಸೆಣೆಸಲಿವೆ. 2 ನೇ ಸೆಮಿಫೈನಲ್ಸ್ ನಲ್ಲಿ ಗೆದ್ದವರು ನ್ಯೂಜಿಲ್ಯಾಂಡ್ ತಂಡವನ್ನು ಫೈನಲ್ಸ್ ನಲ್ಲಿ ಎದುರಿಸಲಿದ್ದಾರೆ. ನ್ಯೂಜಿಲ್ಯಾಂಡ್ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ಸ್ ಗೆ ಪ್ರವೇಶಿಸಿದೆ.