ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಭಾರತ ತಂಡ ನೆಟ್ ರನ್ ರೇಟ್ ನಲ್ಲಿ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಹಿಂದಿಕ್ಕಿದೆ.
ಸ್ಕಾಟ್ಲೆಂಡ್ ನೀಡಿದ 86 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ ಮುಂದೆ ಮತ್ತೊಂದು ಸವಾಲಿನ ಗುರಿ ಇತ್ತು. ಅದೇನೆಂದರೆ 7.1 ಓವರ್ ನಲ್ಲಿ ಭಾರತ ಈ ಪಂದ್ಯ ಗೆದ್ದರೆ ಆಗ ಭಾರತದ ನೆಟ್ ರನ್ ರೇಟ್ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನೆಟ್ ರನ್ ರೇಟ್ ಗಿಂತ ಹೆಚ್ಚಾಗುತ್ತಿತ್ತು. ಹೀಗಾಗಿ ಭಾರತಕ್ಕೆ ಸಿಡಿಲಬ್ಬರದ ಬ್ಯಾಟಿಂಗ್ ಅವಶ್ಯಕತೆ ಇತ್ತು.
ಇದೇ ಸವಾಲಿನೊಂದಿಗೆ ಕ್ರೀಸ್ ಗೆ ಇಳಿದ ಭಾರತದ ಆರಂಭಿಕ ಜೋಡಿಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ ಅಕ್ಷರಶಃ ಸಿಡಿಲಿಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 5 ಓವರ್ ನಲ್ಲಿಯೇ ಈ ಜೋಡಿ 70ರನ್ ಗಳ ಭರ್ಜರಿ ಜೊತೆಯಾಟವಾಡಿತು.
16 ಎಸೆತ ಎದುರಿಸಿದ ರೋಹಿತ್ ಶರ್ಮಾ ಒಂದು ಸಿಕ್ಸರ್ ಮತ್ತು 5 ಬೌಂಡರಿಗಳ ಸಹಿತ 30 ರನ್ ಗಳಿಸಿ ಔಟಾದರು. ಅಷ್ಟು ಹೊತ್ತಿಗೆ ಭಾರತ ಈ ಸವಾಲು ಮುಟ್ಟುವುದು ಖಚಿತವಾಗಿತ್ತು. ಮತ್ತೊಂದು ತುದಿಯಲ್ಲಿ ಭರ್ಜರಿಯಾಗಿ ಆಡುತ್ತಿದ್ದ ಕೆಎಲ್ ರಾಹುಲ್ ಕೇವಲ 19 ಎಸೆತದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದರು. ಆದರೆ ನಂತರದ ಓವರ್ ನಲ್ಲಿ ರಾಹುಲ್ ಔಟ್ ಆದರು.
ಬಳಿಕ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಗೆಲುವಿನ ಔಪಚಾರಿಕತೆಯನ್ನು ಮುಕ್ತಾಯಗೊಳಿಸಿದರು. ಆ ಮೂಲಕ ಭಾರತ ಸ್ಕಾಟ್ಲೆಂಡ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.