ನವದೆಹಲಿ: ಕೋವಿಡ್-19 ನ ಉಪಟಳದ ನಂತರ ದೇಶಾದ್ಯಂತ ಕನಿಷ್ಟ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಎಲ್ಲಾ ವಿದ್ಯಾರ್ಥಿಗಳಿಗೂ ಶಾಲೆಗಳನ್ನು ತೆರೆದಿದ್ದು ಭಾರತದಾದ್ಯಂತ ಶೇ.92 ರಷ್ಟು ಶಿಕ್ಷಕರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶಾಲೆಗಳ ಪುನಾರಂಭವನ್ನು ನ.02 ರಂದು ಪರಿಶೀಲನೆ ಮಾಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಹಜ ಸ್ಥಿತಿಯನ್ನು ಮರಳಿ ತರಬೇಕು ಹಾಗೂ ಲಸಿಕೆ ಪ್ರಮಾಣ ಹೆಚ್ಚಳವಾಗಬೇಕು ಎಂದು ಕರೆ ನೀಡಿದ್ದಾರೆ.
ಸಚಿವಾಲಯ ಹಂಚಿಕೊಂಡಿರುವ ಅಂಕಿ-ಅಂಶಗಳ ಪ್ರಕಾರ ಶೇ.92 ರಷ್ಟು ಬೋಧಕ ಸಿಬ್ಬಂದಿಗಳಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳ ಬೋಧಕ ಸಿಬ್ಬಂದಿಗಳ ಪೈಕಿ ಶೇ.96 ರಷ್ಟು ಮಂದಿಗೆ ಲಸಿಕೆ ನೀಡಲಾಗಿದ್ದರೆ, ಶೇ.86 ರಷ್ಟು ಬೋಧಕೇತರ ಸಿಬ್ಬಂದಿಗಳು ಲಸಿಕೆ ಪಡೆದಿದ್ದಾರೆ.
ಕೋವಿಡ್-19 ಸೋಂಕು ತೀವ್ರವಾಗಿದ್ದರಿಂದ ಕಳೆದ ವರ್ಷ ಮಾರ್ಚ್ ನಿಂದ ರಾಷ್ಟ್ರವ್ಯಾಪಿ ಲಾಕ್ ಡೌನ್ ನ ಪರಿಣಾಮದಿಂದ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಆನ್ ಲೈನ್ ತರಗತಿಗಳನ್ನು ನಡೆಸಲಾಗುತ್ತಿತ್ತು.