HEALTH TIPS

ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ: ಸಾವಿನ ಸಂಖ್ಯೆ 23ಕ್ಕೆ ಏರಿಕೆ; ನೂರಾರು ಮಂದಿ ಇನ್ನೂ ನಾಪತ್ತೆ

            ಅನಂತಪುರ: ಭಾರಿ ಮಳೆಯಿಂದಾಗಿ ಭಾರಿ ಪ್ರವಾಹಕ್ಕೆ ಸಿಲುಕಿರುವ ಆಂಧ್ರ ಪ್ರದೇಶದಲ್ಲಿ ಮಳೆಯಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.

              ದಕ್ಷಿಣ ಆಂಧ್ರ ಪ್ರದೇಶದ ರಾಯಲಸೀಮ ಪ್ರಾಂತ್ಯದಲ್ಲಿ ಪ್ರವಾಹ ಹೆಚ್ಚಾಗಿದ್ದು, ಅನಂತಪುರ, ತಿರುಪತಿ, ಚಿತ್ತೂರಿನಲ್ಲಿ ಭಾರಿ ಮಳೆ ಮತ್ತು ಪ್ರವಾಹ ಮುಂದುವರೆದಿದೆ. ರಾಯಲಸೀಮಾ ಪ್ರದೇಶವು ಹೆಚ್ಚು ಹಾನಿಗೊಳಗಾಗಿದೆ. ರಾಜ್ಯದ ಚಿತ್ತೂರು, ಕಡಪ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳು ಹಾನಿಗೀಡಾಗಿವೆ. ಗುರುವಾರದಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದು ಪರಿಣಾಮ ಚೆಯ್ಯೂರು ನದಿ ತುಂಬಿ ಹರಿಯುತ್ತಿದೆ. ಅನ್ನಮಯ್ಯ ನೀರಾವರಿ ಯೋಜನೆಗೂ ಪ್ರವಾಹದಿಂದ ಹಾನಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಡಪ ವಿಮಾನ ನಿಲ್ದಾಣವನ್ನು ನವೆಂಬರ್ 25 ರವರೆಗೆ ಮುಚ್ಚಲಾಗಿದೆ.


             ತಿರುಪತಿಯಲ್ಲಿ ಪ್ರವಾಹ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ತಿರುಮಲಕ್ಕೆ ಸಂಪರ್ಕ ಕಲ್ಪಿಸುವ ಘಾಟ್ ರಸ್ತೆಗಳನ್ನು ಮುಚ್ಚಲಾಗಿದೆ. ಅಲ್ಲದೆ ತಿರುಮಲ ನಡಿಗೆ ಮಾರ್ಗವನ್ನೂ ಬಂದ್ ಮಾಡಲಾಗಿದ್ದು, ಯಾತ್ರಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮಳೆಯಿಂದಾಗಿ ತಿರುಪತಿ ಹೊರವಲಯದ ಸ್ವರ್ಣಮುಖಿ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು,  ಜಲಾಶಯಗಳು ತುಂಬಿ ಹರಿಯುತ್ತಿವೆ. ಪ್ರವಾಹದಲ್ಲಿ ಸಾಕಷ್ಟು ಮಂದಿ ಸಿಲುಕಿರುವ ಬಗ್ಗೆ ವರದಿಯಾಗಿದ್ದು, ಹಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಲ್ಲದೆ ದನಕರುಗಳೂ ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎನ್ನಲಾಗಿದೆ.

            ತಿರುಪತಿ ಪ್ರವಾಹದಿಂದಾಗಿ ಕೊಚ್ಚಿ ಹೋಗಿದ್ದ ರಾಜ್ಯ ಸಾರಿಗೆಯ 3 ಬಸ್‌ಗಳು ಜಖಂಗೊಂಡಿದ್ದು, ಅದರೊಳಗಿದ್ದ 12 ಮಂದಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿ ಪರಿಸ್ಥಿತಿ ನಿಭಾಯಿಸಲು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಪ್ರವಾಹದಿಂದಾಗಿ ಹಲವೆಡೆ ರಸ್ತೆಗಳು ಹಾಳಾಗಿದ್ದು, ರೈಲು, ರಸ್ತೆ ಮತ್ತು ವಿಮಾನ ಸಂಚಾರಕ್ಕೆ ತೊಂದರೆಯಾಗಿದೆ.

             ಕಟ್ಟಡ ಕುಸಿದು 4 ಮಂದಿ ಸಾವು
ಇನ್ನು ಅನಂತಪುರ ಜಿಲ್ಲೆಯ ಕದಿರಿ ಪಟ್ಟಣದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ 3 ಅಂತಸ್ತಿನ ಹಳೆಯ ಕಟ್ಟಡ ಕುಸಿದು ಮೂವರು ಮಕ್ಕಳು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕಟ್ಟಡದ ಅವಶೇಷಗಳೊಳಗೆ ಇನ್ನೂ 4 ಮಂದಿ ಸಿಲುಕಿದ್ದಾರೆ ಎಂದು ಕದಿರಿ ಸರ್ಕಲ್ ಇನ್ಸ್‌ಪೆಕ್ಟರ್ ಸತ್ಯಬಾಬು ಮಾಹಿತಿ ನೀಡಿದ್ದಾರೆ.

           ಚಿತ್ರಾವತಿ ನದಿ ಪ್ರವಾಹಕ್ಕೆ ಸಿಲುಕಿದ್ದ 4 ಮಂದಿ ರಕ್ಷಿಣೆ ಮಾಡಿದ ವಾಯುಸೇನೆ
         ಅನಂತಪುರ ಜಿಲ್ಲೆಯ ಕೊತ್ತಪಲ್ಲಿ ಮಂಡಲಂನಲ್ಲಿ ಚಿತ್ರಾವತಿ ನದಿಪ್ರವಾಹದಲ್ಲಿ ಸಿಲುಕಿದ್ದ 4 ಮಂದಿ ಕಾರ್ಮಿಕರನ್ನು ಭಾರತೀಯ ವಾಯುಸೇನೆಯ ಎಂಐ17 ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಯಿತು. ಕಾರ್ಮಿಕರು ಜೆಸಿಬಿ ಮೇಲೆ ಹತ್ತಿ ರಕ್ಷಣೆ ಪಡೆದಿದ್ದರು. ಆದರೆ ಪ್ರವಾಹದ ನೀರಿನ ಭೋರ್ಗರೆತ ಹೆಚ್ಚಾಗಿದ್ದರಿಂದ ಅವರನ್ನು ರಕ್ಷಿಸಲು ವಾಯುಸೇನೆ ಮುಂದಾಗಿತ್ತು.

                  ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದ ಮೃತದೇಹಗಳು
ಇನ್ನು ಆಂಧ್ರ ಪ್ರದೇಶದ ರಾಜಂಪೇಟ್ ಮತ್ತು ನೆಲ್ಲೂರಿನಲ್ಲಿ ಉಂಟಾಗಿರುವ ಪ್ರವಾಹದ ನೀರಿನಲ್ಲಿ 2 ಮೃತದೇಹಗಳು ಕೊಚ್ಚಿಕೊಂಡು ಬಂದಿದ್ದು, ಇದರೊಂದಿಗೆ ಆಂಧ್ರ ಪ್ರದೇಶದಲ್ಲಿ ಮಳೆಯಿಂದಾಗಿ ಸಂಭವಿಸಿದ ಸಾವುಗಳ ಸಂಖ್ಯೆ 23ಕ್ಕೆ ಏರಿಕೆಯಾದಂತಾಗಿದೆ.

ತಮಿಳುನಾಡು ಮತ್ತು ಕೇರಳದಲ್ಲೂ ಮಳೆ ಅಸ್ತವ್ಯಸ್ತವಾಗಿದ್ದು, ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ಇಂದು ಮತ್ತು ನಾಳೆ ಪಂಪಾ ಮತ್ತು ಶಬರಿಮಲೆ ಯಾತ್ರೆಯನ್ನು ನಿಷೇಧಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries