ಅಹ್ಮದಾಬಾದ್: ಬೆಳಕಿನ ಹಬ್ಬ ದೀಪಾವಳಿ ಬೆನ್ನಲ್ಲೇ ಗುಜರಾತ್ ನಲ್ಲಿ ಭೀಕರ್ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 25ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ.
ಗುಜರಾತ್ ನ ಖೇಡಾ ಜಿಲ್ಲೆಯ ಖೇಡಾ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಠಾಣೆಯ ಪಾರ್ಕಿಂಗ್ ಪ್ರದೇಶದಲ್ಲಿ ಈ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ದುರಂತದಲ್ಲಿ ಬೈಕ್, ಕಾರು, ಆಟೋ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕವಾಗಿವೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸುಟ್ಟು ಹೋದ ವಾಹನಗಳ ಪೈಕಿ ಹಲವು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದ ವಾಹನಗಳು ಎನ್ನಲಾಗಿದೆ. ಮತ್ತೆ ಕೆಲವು ವಾಹನಗಳು ಪೊಲೀಸರಿಗೆ ಸೇರಿದ್ದು ಎಂದು ಹೇಳಲಾಗಿದೆ. ಪ್ರಸ್ತುತ ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.
ಪ್ರಕರಣ ದಾಖಲಿಸಿಕೊಂಡಿರುವ ಖೇಡಾ ಟೌನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.