ಅಮೃತಸರ: ಪ್ರತಿಸ್ಪರ್ಧಿ ಪಕ್ಷಗಳ ಶಾಸಕರನ್ನು ಸೇರ್ಪಡೆಗೊಳಿಸುವ ಪೈಪೋಟಿಯ ನಡುವೆಯೇ ಕಾಂಗ್ರೆಸ್ 25ಕ್ಕೂ ಹೆಚ್ಚು ಶಾಸಕರು ಮತ್ತು ಇಬ್ಬರು ಸಂಸದರು ಎಎಪಿ ಜತೆ ಸಂಪರ್ಕದಲ್ಲಿದ್ದಾರೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಹೇಳಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಎರಡು ದಿನಗಳ ಪಂಜಾಬ್ ಭೇಟಿಯಲ್ಲಿರುವ ದೆಹಲಿ ಸಿಎಂ ಕೇಜ್ರಿವಾಲ್ ಅವರು ಇಂದು ಅಮೃತಸರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಎಎಪಿ ಶಾಸಕರು ಪಕ್ಷ ತೊರೆದು ಬೇರೆ ಪಕ್ಷಗಳಿಗೆ ಸೇರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಅವರು, ''ಚುನಾವಣೆಗೂ ಮುನ್ನ ಎಲ್ಲ ಪಕ್ಷಗಳ ಶಾಸಕರು ಪಕ್ಷ ಬದಲಾಯಿಸುವುದು, ಪಕ್ಷಪಾತ ಮಾಡುವುದು ಎಲ್ಲೆಡೆ ಸಾಮಾನ್ಯ. ಕಾಂಗ್ರೆಸ್ ಪಕ್ಷದಿಂದ ಕನಿಷ್ಠ 25 ಶಾಸಕರು ಮತ್ತು ಇಬ್ಬರು ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಆ 'ಕಸ' ನಮಗೆ ಬೇಡ ಎಂದರು.
ಕಳೆದ ಆರು ತಿಂಗಳಲ್ಲಿ ರೂಪಿಂದರ್ ಕೌರ್ ಸೇರಿದಂತೆ ಸುಮಾರು ನಾಲ್ವರು ಆಪ್ ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಕೇಜ್ರಿವಾಲ್ ಅವರು ಈ ಹೇಳಿಕೆ ನೀಡಿದ್ದಾರೆ.
ಜುಲೈನಲ್ಲಿ ಭೋಲಾತ್ ಶಾಸಕ ಸುಖಪಾಲ್ ಸಿಂಗ್ ಖೈರಾ ಮತ್ತು ಇತರ ಇಬ್ಬರು ಶಾಸಕರಾದ ಪಿರ್ಮಲ್ ಸಿಂಗ್ ಮತ್ತು ಜಗದೇವ್ ಸಿಂಗ್ ಕಮಲು ಅವರು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.
ಕಳೆದ ನಾಲ್ಕುವರೆ ವರ್ಷಗಳಲ್ಲಿ ಒಂಬತ್ತು ಶಾಸಕರು ಎಎಪಿ ತೊರೆದಿದ್ದರಿಂದ ಪಂಜಾಬ್ ವಿಧಾನಸಭೆಯಲ್ಲಿ ಆಪ್ ಶಾಸಕರ ಸಂಖ್ಯೆ 11ಕ್ಕೆ ಕುಸಿದಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 20 ಸ್ಥಾನಗಳನ್ನು ಗೆದ್ದಿತ್ತು.