ಗಾಜಿಯಾಬಾದ್: ನವೆಂಬರ್ 26ರೊಳಗೆ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಿ, ಇಲ್ಲದೇ ಹೋದಲ್ಲಿ ರೈತರ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದು ಕೇಂದ್ರ ಸರ್ಕಾರಕ್ಕೆ ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರಕ್ಕೆ ನವೆಂಬರ್ 26 ರವರೆಗೆ ಸಮಯವಿದೆ, ನವೆಂಬರ್ 27 ರಿಂದ, ರೈತರು ಹಳ್ಳಿಗಳಿಂದ ಟ್ರ್ಯಾಕ್ಟರ್‌ಗಳಲ್ಲಿ ದೆಹಲಿಯ ಸುತ್ತಲಿನ ಚಲನವಲನದ ಸ್ಥಳಗಳಲ್ಲಿ ಗಡಿಯನ್ನು ತಲುಪಿ, ಅಲ್ಲಿ ಟೆಂಟ್ ಗಳನ್ನು ಹಾಕಿ ಪ್ರತಿಭಟನೆಯನ್ನು ತೀವ್ರಗೊಳಿಸಲಿದ್ದಾರೆಂದು ಹೇಳಿದ್ದಾರೆ.
ಟಿಕ್ರಿ, ಸಿಂಘು ಹಾಗೂ ಘಾಜಿಪುರ- ಹೀಗೆ ದಿಲ್ಲಿ ಸುತ್ತಲಿನ ಮೂರು ಗಡಿಗಳಲ್ಲಿ ಸಾವಿರಾರು ರೈತರು 2020ರ ನವೆಂಬರ್ 26ರಿಂದಲೂ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.
ಈ ಮೂರು ಕೃಷಿ ಕಾಯ್ದೆಗಳು ತಮ್ಮ ಹಿತಾಸಕ್ತಿಗಳಿಗೆ ಅಪಾಯಕಾರಿಯಾಗಿದೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ. ಇವುಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಇವು ರೈತರ ಪರವಾಗಿರುವ ಕಾಯ್ದೆಗಳಾಗಿವೆ ಎಂದು ಪ್ರತಿಪಾದಿಸುತ್ತಿರುವ ಸರ್ಕಾರ, ಕಾಯ್ದೆಗಳನ್ನು ರದ್ದುಗೊಳಿಸಲು ನಿರಾಕರಿಸುತ್ತಲೇ ಬಂದಿದೆ.
ರೈತ ಸಂಘಟನೆಗಳ ಒಕ್ಕೂಟಗಳು ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಮತ್ತು ಸಚಿವರೊಂದಿಗೆ ಈ ಸುಮಾರು ಒಂದು ವರ್ಷದಲ್ಲಿ ಅನೇಕ ಸುತ್ತಿನ ಪ್ರತಿಭಟನೆಗಳು ನಡೆದಿವೆ. ಆದರೆ ಯಾವ ಸಭೆಯಲ್ಲಿಯೂ ಒಮ್ಮತದ ನಿರ್ಣಯ ತೆಗೆದುಕೊಳ್ಳುವುದು ಈವರೆಗೂ ಸಾಧ್ಯವಾಗಿಲ್ಲ. ಈ ನಡುವೆ ರೈತ ಒಕ್ಕೂಟಗಳು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ.