ನವದೆಹಲಿ: ಇಂಡೊ-ಟಿಬೆಟನ್ ಬಾರ್ಡರ್ ಪೊಲೀಸ್‌ನ (ಐಟಿಬಿಪಿ) 260 ಯೋಧರಿಗೆ ಭಾನುವಾರ 'ಕೇಂದ್ರ ಗೃಹ ಮಂತ್ರಿಗಳ ವಿಶೇಷ ಕಾರ್ಯಾಚರಣೆ ಪದಕ' ಘೋಷಿಸಲಾಗಿದೆ.
ಪೂರ್ವ ಲಡಾಖ್‌ನ ಗಡಿಯಲ್ಲಿನ ಸಂಘರ್ಷದ ವೇಳೆ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ತೋರಿದ ಅಪ್ರತಿಮ ಶೌರ್ಯವನ್ನು ಪರಿಗಣಿಸಿ ಯೋಧರಿಗೆ ಈ ಗೌರವ ನೀಡಲಾಗುತ್ತಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಐಟಿಬಿಪಿಯಲ್ಲದೇ ವಿವಿಧ ರಾಜ್ಯಗಳ ಪೊಲೀಸ್ ಹಾಗೂ ಕೇಂದ್ರೀಯ ಪಡೆಗಳ ಯೋಧರು ಸೇರಿದಂತೆ ಒಟ್ಟು 397 ಸಿಬ್ಬಂದಿಯನ್ನು ಈ ವಿಶೇಷ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
'260 ಯೋಧರು ಏಕಕಾಲದಲ್ಲಿ ವಿಶೇಷ ಪದಕ ಗೌರವಕ್ಕೆ ಆಯ್ಕೆಯಾಗಿರುವುದು ಇದೇ ಮೊದಲು. ಪ್ರತಿಕೂಲ ಪರಿಸ್ಥಿತಿಯಲ್ಲೂ ಐಟಿಬಿಪಿ ಯೋಧರು ಲಡಾಖ್ ಗಡಿಯಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಚೀನಾ ಸೈನಿಕರೊಂದಿಗಿನ ಸಂಘರ್ಷದ ವೇಳೆ 'ಆಪರೇಷನ್ ಸ್ನೊ ಲೆಪರ್ಡ್' ಮೂಲಕ ಅದಮ್ಯ ಧೈರ್ಯ, ಕರ್ತವ್ಯ ನಿಷ್ಠೆ ಮೆರೆದರು' ಎಂದು ಐಟಿಬಿಪಿ ವಕ್ತಾರರೊಬ್ಬರು ತಿಳಿಸಿದ್ದಾರೆ.
ಭಯೋತ್ಪಾದಕರ ನಿಗ್ರಹ, ಗಡಿಯಲ್ಲಿ ಕಾರ್ಯಾಚರಣೆ, ಶಸ್ತ್ರಾಸ್ತ್ರಗಳ ಅಕ್ರಮ ಸಾಗಣೆ ನಿಯಂತ್ರಣ, ಮಾದಕವಸ್ತುಗಳ ಕಳ್ಳಸಾಗಣೆ ತಡೆಯುವುದು ಹಾಗೂ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳಂತಹ ಕಾರ್ಯಾಚರಣೆಯಲ್ಲಿನ ಸೇವೆ ಗುರುತಿಸಿ 'ಕೇಂದ್ರ ಗೃಹ ಮಂತ್ರಿಗಳ ವಿಶೇಷ ಕಾರ್ಯಾಚರಣೆ ಪದಕ' ಪ್ರದಾನ ಮಾಡಲಾಗುತ್ತದೆ. ಇದನ್ನು 2018ರಲ್ಲಿ ಸ್ಥಾಪಿಸಲಾಯಿತು.