ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ಕೃಷಿ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚ ನ.29 ರಂದು ನಿಗದಿಪಡಿಸಿದ್ದ ಸಂಸತ್ ಗೆ ಟ್ರ್ಯಾಕ್ಟರ್ ಜಾಥವನ್ನು ರದ್ದುಗೊಳಿಸಿದೆ.
ಮುಂದಿನ ನಡೆಯ ಬಗ್ಗೆ ನಿರ್ಧರಿಸಲು ಮುಂದಿನ ತಿಂಗಳು ಸಭೆ ನಡೆಸುವುದಾಗಿ ರೈತ ನಾಯಕರು ಮಾಹಿತಿ ನೀಡಿದ್ದಾರೆ.
ಸಂಸತ್ ನ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಈ ಅಧಿವೇಶನದಲ್ಲಿ, ರೈತರು ವಿರೋಧಿಸುತ್ತಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲಾಗುತ್ತದೆ.
ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚ (ಎಸ್ ಕೆಎಂ) ಕಳೆದ ಒಂದು ವರ್ಷದಿಂದ ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ಯತ್ನಿಸಿದ್ದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿತ್ತು. ಈಗ ತಮ್ಮ ಬೆಳೆಗಳಿಗೆ ಎಂಎಸ್ ಪಿಗೆ ಕಾನೂನು ಜಾರಿಗೊಳಿಸುವುದಕ್ಕಾಗಿ ರೈತ ಸಂಘಟನೆಗಳು ಆಗ್ರಹಿಸುತ್ತಿವೆ.
ಎಸ್ ಕೆಎಂ ನಾಯಕ ದರ್ಶನ್ ಪಾಲ್ ಮಾತನಾಡಿದ್ದು, ನ.29 ರಂದು ಹಮ್ಮಿಕೊಳ್ಳಲಾಗಿದ್ದ ಸಂಸತ್ ಗೆ ಜಾಥವನ್ನು ರದ್ದುಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ರೈತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ, ಪ್ರತಿಭಟನೆ ವೇಳೆ ಜೀವ ಕಳೆದುಕೊಂಡ ರೈತರಿಗೆ ಸ್ಮಾರಕ ನಿರ್ಮಿಸಲು ಭೂಮಿ ನೀಡುವಂತೆ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕೈ ಬಿಡುವುದೂ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೆವು. ಪ್ರಧಾನಿ ಮೋದಿ ಅವರಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ ಡಿ.04 ರಂದು ಎಸ್ ಕೆಎಂ ಮತ್ತೊಂದು ಸಭೆ ನಡೆಸಿ ಮುಂದಿನ ನಡೆ ಏನಿರಲಿದೆ ಎಂಬುದನ್ನು ನಿರ್ಧರಿಸಲಿವೆ ಎಂದು ದರ್ಶನ್ ಪಾಲ್ ತಿಳಿಸಿದ್ದಾರೆ.