ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಮೂರು ಗಡಿ ಪ್ರದೇಶಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಯು ನವೆಂಬರ್ ತಿಂಗಳಾಂತ್ಯದ ವೇಳೆಗೆ ಒಂದು ವರ್ಷ ಪೂರೈಸಲಿದೆ. ಈ ಹಿನ್ನೆಲೆ ನವೆಂಬರ್ 29ರಂದು ಸಂಸತ್ ಮೆರವಣಿಗೆ ನಡೆಸಲು ರೈತ ಸಂಘಟನೆಯು ಯೋಜನೆ ಹಾಕಿಕೊಂಡಿವೆ.
ಮಂಗಳವಾರ ಸಭೆ ನಡೆಸಿದ ಕಿಸಾನ್ ಮೋರ್ಚಾ ಒಕ್ಕೂಟದ 9 ರೈತ ಸಂಘಟನೆಗಳು ಸಂಸತ್ ಮೆರವಣಿಗೆ(ಪಾರ್ಲಿಮೆಂಟ್ ಮಾರ್ಚ್) ನಡೆಸಲು ನಿರ್ಧರಿಸಿವೆ. ಆ ಮೂಲಕ ರೈತ ಸಂಘಟನೆಗಳ ಹೋರಾಟದ ಶಕ್ತಿ ಪ್ರದರ್ಶನಕ್ಕೆ ರೈತರು ಅಣಿಯಾಗಿದ್ದಾರೆ.
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ನವೆಂಬರ್ 29ರಂದು ನವದೆಹಲಿ ಟಿಕ್ರಿ ಗಡಿ ಹಾಗೂ ಘಾಜಿಪುರ್ ಗಡಿ ಪ್ರದೇಶಗಳಿಂದ ಸಂಸತ್ ಕಡೆಗೆ ಟ್ರ್ಯಾಕ್ಟರ್ ಗಳಲ್ಲಿ ಮರೆವಣಿಗೆ ಪ್ರಾರಂಭಿಸಲಿದ್ದಾರೆ. ರೈತರ ಈ ಟ್ರ್ಯಾಕ್ಟರ್ ಅನ್ನು ಎಲ್ಲಿ ನಿಲ್ಲಿಸಲಾಗುತ್ತದೆಯೋ ಅಲ್ಲಿಯೇ ಹೋರಾಟ ಮುಂದುವರಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ಸಂದೇಶ:
ಪೂರ್ವ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಿಹಾರದ ಭಾಗಗಳನ್ನು ಒಳಗೊಂಡಿರುವ ಪೂರ್ವಾಂಚಲ್ ಪ್ರದೇಶದಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಎಚ್ಚರಿಸಿದ್ದಾರೆ. ದೆಹಲಿ ಗಡಿಯಲ್ಲಿ ರೈತ ವಿರೋಧಿ ಕಾನೂನು ಪ್ರತಿಭಟನೆ ಒಂದು ವರ್ಷ ಪೂರೈಸುವ ನಾಲ್ಕು ದಿನಗಳ ಮೊದಲು ಅಂದರೆ ನವೆಂಬರ್ 22ರಂದು ಲಕ್ನೋದಲ್ಲಿ 'ಕಿಸಾನ್ ಮಹಾಪಂಚಾಯತ್' ನಡೆಸಲಾಗುವುದು ಎಂದು ಟಿಕಾಯತ್ ಹೇಳಿದ್ದಾರೆ.
ಲಕ್ನೋದಲ್ಲಿ ಐತಿಹಾಸಿಕ ಕಿಸಾನ್ ಪಂಚಾಯತ್:
ಮುಂಬರುವ ನವೆಂಬರ್ 22ರಂದು ಲಕ್ನೋದಲ್ಲಿ ನಡೆಯಲಿರುವ ಕಿಸಾನ್ ಮಹಾಪಂಚಾಯತ್ ಐತಿಹಾಸಿಕವಾಗಲಿದೆ. ರೈತ ವಿರೋಧಿ ಸರ್ಕಾರದ ಶವಪೆಟ್ಟಿಗೆಗೆ ಮತ್ತು ಮೂರು ಕರಾಳ ಕಾನೂನಿಗೆ ಕೊನೆಯ ಮೊಳೆ ಎಂಬುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಈ ಮಹಾಪಂಚಾಯತ್ ಸಾಬೀತುಪಡಿಸುತ್ತದೆ. ಈಗ 'ಅನ್ನದಾತ' (ಆಹಾರ ಪೂರೈಕೆದಾರರು) ಚಳವಳಿಯು ಪೂರ್ವಾಂಚಲ್‌ನಲ್ಲಿಯೂ ತೀವ್ರಗೊಳ್ಳಲಿದೆ "ಎಂದು ಭಾರತೀಯ ಕಿಸಾನ್ ಮೋರ್ಚಾದ ಮುಖ್ಯಸ್ಥ ರಾಕೇಶ್ ಟಿಕಾಯತ್ ಟ್ವೀಟ್ ಮಾಡಿದ್ದಾರೆ.
ನವದೆಹಲಿಯ ಮೂರು ಗಡಿಗಳಲ್ಲಿ ರೈತರ ಹೋರಾಟ:
ಕಳೆದ 2020ರ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಾದಿತ ಕಾಯ್ದೆಗಳು ಯಾವುವು?
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ಕಣ್ಣು ಕೆಂಪಾಗಿಸಿವೆ. ಈ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತರು ನಿರಂತರವಾಗಿ ಹೋರಾಟ, ಪ್ರತಿಭಟನೆ, ಟ್ರ್ಯಾಕ್ಟರ್ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರತಿಭಟನಾ ನಿರತ ರೈತ ಸಂಘಟನೆಗಳ ಪ್ರತಿನಿಧಿಗಳ ನಡುವೆ ಈಗಾಗಲೇ 13ಕ್ಕೂ ಹೆಚ್ಚು ಸುತ್ತಿನ ಸಂಧಾನ ಮಾತುಕತೆಗಳನ್ನು ನಡೆಸಲಾಗಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂಬ ನಿಲುವು ಪ್ರದರ್ಶಿಸುತ್ತಿದೆ. ಕೇಂದ್ರ ಸರ್ಕಾರದ ಮೊಂಡುತನದ ವಿರುದ್ಧ ರೈತರ ಹೋರಾಟವು ತೀವ್ರಗೊಳುತ್ತಿದೆ. ಇದೇ ನವೆಂಬರ್ 26ರಂದು ರೈತರ ಸುದೀರ್ಘ ಪ್ರತಿಭಟನೆ ಒಂದು ವರ್ಷ ಪೂರೈಸಲಿದೆ.