ನವದೆಹಲಿ: 'ದೇಶದ ಮಹಿಳೆಯರ ಫಲವಂತಿಕೆಯ ದರ 2.2ರಿಂದ 2ಕ್ಕೆ ಇಳಿಕೆಯಾಗಿದೆ' ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ಎರಡನೇ ಹಂತದ ವರದಿಯಲ್ಲಿ ಹೇಳಲಾಗಿದೆ.
ಉತ್ತರ, ಪೂರ್ವ ಮತ್ತು ಈಶಾನ್ಯದ ರಾಜ್ಯಗಳು ಸೇರಿ ಒಟ್ಟು 14 ರಾಜ್ಯಗಳಲ್ಲಿ ಎರಡನೇ ಹಂತದ ಸಮೀಕ್ಷೆಯನ್ನು ನಡೆಸಲಾಗಿತ್ತು.
ದೇಶದ ಮಹಿಳೆಯರ ಫಲವಂತಿಕೆಯ ದರ ಇಳಿಕೆಯಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೇಶದಲ್ಲಿನ ಒಟ್ಟು ಜನನ ಪ್ರಮಾಣವನ್ನು, ಫಲವಂತಿಕೆ ವಯಸ್ಸಿನ ಒಟ್ಟು ಮಹಿಳೆಯರ ಸಂಖ್ಯೆಯೊಂದಿಗೆ ತಾಳೆ ಮಾಡಿ ಫಲವಂತಿಕೆ ದರವನ್ನು ಲೆಕ್ಕಹಾಕಲಾಗುತ್ತದೆ. 2015-16ರಲ್ಲಿ ಫಲವಂತಿಕೆ ದರವು 2.2ರಷ್ಟು ಇತ್ತು. 2019-21ರಲ್ಲಿ ಈ ದರವು 2ಕ್ಕೆ ಇಳಿದಿದೆ. ದೇಶದ ನಗರ ಪ್ರದೇಶದಲ್ಲಿ ಫಲವಂತಿಕೆ ದರವು 1.6ರಷ್ಟು ಇದೆ. ಗ್ರಾಮೀಣ ಪ್ರದೇಶಗಳಲ್ಲಿ 2.1ರಷ್ಟು ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
2015-16ಕ್ಕೆ ಹೋಲಿಸಿದರೆ, ಗರ್ಭನಿರೋಧಕ ಕ್ರಮಗಳನ್ನು ಅನುಸರಿಸುವವರ ಪ್ರಮಾಣವು 2019-21ರಲ್ಲಿ ಏರಿಕೆಯಾಗಿದೆ. 2015-16ರಲ್ಲಿ ದೇಶದ ಶೇ 54ರಷ್ಟು ಮಂದಿ ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದರು. 2019-21ರಲ್ಲಿ ದೇಶದ ಶೇ 67ರಷ್ಟು ಜನರು ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಹೀಗಾಗಿಯೇ ಫಲವಂತಿಕೆಯ ದರದಲ್ಲಿ ಇಳಿಕೆ ಸಾಧ್ಯವಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಎರಡನೇ ಹಂತದಲ್ಲಿ ಸಮೀಕ್ಷೆಗೆ ಒಳಪಟ್ಟ ರಾಜ್ಯಗಳಲ್ಲಿ ಜನಸಂಖ್ಯೆಯ ಮಟ್ಟ ಕಾಯ್ದುಕೊಳ್ಳಲು ಅಗತ್ಯವಾದ ಫಲವಂತಿಕೆ ದರವು 2.1ರಷ್ಟು ಇದೆ ಎಂದು ವರದಿಯು ಹೇಳಿದೆ.
ಪುರುಷರಿಗಿಂತ ಹೆಚ್ಚು ಮಹಿಳೆಯರು
ದೇಶದ ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಇದೇ ಮೊದಲ ಬಾರಿ ಪುರುಷರಿಗಿಂತಲೂ ಹೆಚ್ಚು ಇದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ವರದಿಯನ್ನು ಉಲ್ಲೇಖಿಸಿ ಆರೋಗ್ಯ ಸಚಿವಾಲಯವು ಹೇಳಿದೆ.
ದೇಶದಲ್ಲಿ ಈಗ 1,020 ಮಹಿಳೆಯರಿಗೆ 1,000 ಪುರುಷರು ಇರಬಹುದು ಎಂದು ಸಮೀಕ್ಷೆಯು ಅಂದಾಜಿಸಿದೆ. ಇದು ಮಾದರಿ ಆಧಾರದಲ್ಲಿ ಹಾಕಿದ ಲೆಕ್ಕಾಚಾರ. ಇದು ಜನಸಂಖ್ಯೆ ಪ್ರವೃತ್ತಿಯ ಸೂಚಕ ಮಾತ್ರ. ವಾಸ್ತವದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದು ಜನಗಣತಿಯ ವರದಿ ಬಂದ ಬಳಿಕವಷ್ಟೇ ತಿಳಿಯುತ್ತದೆ. 2011ರ ಜನಗಣತಿ ಪ್ರಕಾರ, ದೇಶದಲ್ಲಿ ಸಾವಿರ ಪುರುಷರಿಗೆ 940 ಮಹಿಳೆಯರು ಮಾತ್ರ ಇದ್ದರು.