HEALTH TIPS

ಭಾರತದಲ್ಲಿ ಡಿ.31ರೊಳಗೆ 94 ಕೋಟಿ ಜನರಿಗೆ ಸಿಗುತ್ತಾ ಕೊವಿಡ್-19 ಲಸಿಕೆ?

                    ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ರಕ್ಷಣೆ ಪಡೆದುಕೊಳ್ಳುವುದಕ್ಕೆ ಲಸಿಕೆಯೊಂದೇ ಪ್ರಮುಖ ಮಾರ್ಗ ಎನ್ನುವುದನ್ನು ಈಗಾಗಲೇ ಆರೋಗ್ಯ ತಜ್ಞರು ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ದೃಢಪಡಿಸಿದ್ದಾರೆ.

               ದೇಶದಲ್ಲಿ 2021ರ ಡಿಸೆಂಬರ್ 31ರೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಆದರೆ ನಿಗದಿತ ಸಮಯದಲ್ಲಿ ಎಲ್ಲರಿಗೂ ಲಸಿಕೆ ವಿತರಿಸುವುದು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ದೇಶದ 94 ಕೋಟಿ ಅರ್ಹ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯ ಎರಡೂ ಡೋಸ್ ವಿತರಿಸುವುದು ಅಸಾಧ್ಯವಾಗಲಿದೆ. ಆದರೆ ಆ ಹೊತ್ತಿಗೆ ಎಲ್ಲರಿಗೂ ಲಸಿಕೆಯು ಲಭ್ಯವಾಗಿರುವಂತೆ ನೋಡಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

          ಭಾರತದಲ್ಲಿ ನವೆಂಬರ್ ಮೊದಲ ವಾರದ ಹೊತ್ತಿಗೆ 74 ಕೋಟಿ ಮಂದಿ ಕೊವಿಡ್-19 ಲಸಿಕೆಯ ಮೊದಲ ಡೋಸ್ ಹಾಗೂ 35 ಕೋಟಿ ಜನರು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಒಟ್ಟು 109 ಕೋಟಿ ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ದೇಶದ 94 ಕೋಟಿ ಜನರಿಗೆ ಎರಡೂ ಡೋಸ್ ಲಸಿಕೆ ವಿತರಿಸಲು ಇನ್ನೂ 188 ಕೋಟಿ ಡೋಸ್ ಲಸಿಕೆ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

           ಹಾಗಿದ್ದರೆ ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಕಿಕೊಂಡಿರುವ ಯೋಜನೆ ಹೇಗಿತ್ತು?, ಸರ್ಕಾರದ ಯೋಜನೆ ಈಗ ಯಾವ ಹಂತದಲ್ಲಿದೆ?, ಎಷ್ಟು ಹಂತಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ?, ಎಷ್ಟು ಮಂದಿ ಮೊದಲ ಡೋಸ್, ಎಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ವಿತರಿಸಲಾಗಿದೆ?, ಕೇಂದ್ರ ಸರ್ಕಾರದಿಂದ ಪೂರೈಕೆಯಾಗಿ ಬಳಕೆಯಾಗಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟಿದೆ?, ದೇಶದಲ್ಲಿ ಎಷ್ಟು ಕೊರೊನಾವೈರಸ್ ಲಸಿಕೆಗಳನ್ನು ವಿತರಣೆ ಮಾಡಲಾಗುತ್ತಿದೆ ಎಂಬುದರ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.

                                  ದೇಶದಲ್ಲಿ ಕೊವಿಡ್-19 ಲಸಿಕೆಗೆ ಕೊರತೆಯಿಲ್ಲ

             ಭಾರತದಲ್ಲಿ ಕೊರೊನಾವೈರಸ್ ಲಸಿಕೆಗೆ ಯಾವುದೇ ರೀತಿ ಕೊರತೆಯಿಲ್ಲ. ನಾವು ಈಗಾಗಲೇ ಲಸಿಕೆಯನ್ನು ರಫ್ತು ಮಾಡುವುದಕ್ಕೆ ಶುರು ಮಾಡಿದ್ದೇವೆ. ಆದರೆ ಸಾರ್ವಜನಿಕರು ಲಸಿಕೆ ಪಡೆದುಕೊಳ್ಳುವುದಕ್ಕೆ ಮುಂದೆ ಬರಬೇಕು, ಲಭ್ಯವಿರುವ ಲಸಿಕೆಯನ್ನು ಹಾಕಿಸಿಕೊಳ್ಳುವುದಕ್ಕೆ ಆಸಕ್ತಿ ವಹಿಸಬೇಕಿದೆ. ದೊಡ್ಡ ರಾಜ್ಯಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಕೇಂದ್ರ ಸರ್ಕಾರವು ಈಗಾಗಲೇ "ಹರ್ ಘರ್ ದಸ್ತಕಿ" ಎಂಬ ಯೋಜನೆಯನ್ನು ಪರಚಯಿಸಿದ್ದು, ಮನೆ ಮನೆಗಳಿಗೆ ತೆರಳಿ ಕೊವಿಡ್-19 ಲಸಿಕೆ ವಿತರಿಸುವುದಕ್ಕೆ ಸೂಚಿಸಲಾಗಿದೆ, ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

130 ಕೋಟಿ ಡೋಸ್ ಲಸಿಕೆ ಪೂರೈಸಿದ ಬಗ್ಗೆ ಉಲ್ಲೇಖ

                          130 ಕೋಟಿ ಡೋಸ್ ಲಸಿಕೆ ಪೂರೈಸಿದ ಬಗ್ಗೆ ಉಲ್ಲೇಖ

          ಭಾರತದಲ್ಲಿ ಈಗಾಗಲೇ 109 ಕೋಟಿ ಡೋಸ್ ಕೊರೊನಾವೈರಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಇದರ ಹೊರತಾಗಿ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 20 ಕೋಟಿ ಡೋಸ್ ಲಸಿಕೆಯ ಸಂಗ್ರಹವಿದೆ. ರಾಜ್ಯಗಳ ಸರ್ಕಾರಿ ಆಸ್ಪತ್ರೆಗಳಲ್ಲಿ 16 ಕೋಟಿ ಡೋಸ್ ಕೊವಿಡ್-19 ಲಸಿಕೆಯು ಲಭ್ಯವಿದ್ದರೆ, 4 ರಿಂದ 5 ಕೋಟಿ ಡೋಸ್ ಲಸಿಕೆಯು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ದೇಶದಲ್ಲಿ ಈವರೆಗೂ 130 ಕೋಟಿ ಡೋಸ್ ಲಸಿಕೆಯನ್ನು ಪೂರೈಕೆ ಮಾಡಲಾಗಿದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲರಿಗೂ ಲಸಿಕೆ ನೀಡಲು 188 ಕೋಟಿ ಡೋಸ್ ಬೇಕು

                   ಎಲ್ಲರಿಗೂ ಲಸಿಕೆ ನೀಡಲು 188 ಕೋಟಿ ಡೋಸ್ ಬೇಕು

       ಭಾರತದಲ್ಲಿ 2021ರ ಡಿಸೆಂಬರ್ 31ರೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ಸರ್ಕಾರವು ಯೋಜನೆ ಹಾಕಿಕೊಂಡಿದೆ. ಆದರೆ ಹೀಗೆ ಎಲ್ಲರಿಗೂ ಲಸಿಕೆ ನೀಡಬೇಕಾದರೆ ಈಗ ವಿತರಿಸಿರುವ ಲಸಿಕೆಯ ಪ್ರಮಾಣವನ್ನೂ ಬಿಟ್ಟು, ಇನ್ನೂ 188 ಕೋಟಿ ಡೋಸ್ ಲಸಿಕೆ ಬೇಕಾಗುತ್ತದೆ. ಆದರೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ 54 ಕೋಟಿ ಡೋಸ್ ಲಸಿಕೆಯು ಪೂರೈಕೆಯಾಗುವ ನಿರೀಕ್ಷೆಯಿದೆ. ಈ ಪೈಕಿ ಕೊವಿಶೀಲ್ಡ್ 44 ಕೋಟಿ ಡೋಸ್, ಕೊವ್ಯಾಕ್ಸಿನ್ 10 ಕೋಟಿ ಡೋಸ್ ಲಸಿಕೆಯನ್ನು ಪೂರೈಸಲಿವೆ. ಇದರ ಜೊತೆಗೆ ಜೈಡಸ್ ಕ್ಯಾಡಿಲಾ ಮತ್ತು ಬಯೋಲಾಜಿಕಲ್-ಇ ಕಂಪನಿಗಳ ಲಸಿಕೆಯು ಪೂರೈಕೆಯಾಗುವ ನಿರೀಕ್ಷೆಯಿದೆ.

2022ರ ವೇಳೆಗೆ ಎರಡೂ ಡೋಸ್ ಲಸಿಕೆ ವಿತರಣೆ

                      2022ರ ವೇಳೆಗೆ ಎರಡೂ ಡೋಸ್ ಲಸಿಕೆ ವಿತರಣೆ

            ಜಗತ್ತಿನ ಯಾವುದೇ ರಾಷ್ಟ್ರವು ಶೇ.100ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆಯನ್ನು ವಿತರಿಸುವಲ್ಲಿ ಯಶಸ್ವಿಯಾಗಿಲ್ಲ. ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವೆ 84 ದಿನಗಳ ಅಂತರವಿದೆ. ಒಂದು ವೇಳೆ ಡಿಸೆಂಬರ್ 31ರೊಳಗೆ ದೇಶದಲ್ಲಿ ಬಾಕಿ ಉಳಿದಿರುವ 20 ಕೋಟಿ ಜನರಿಗೆ ಮೊದಲ ಡೋಸ್ ಲಸಿಕೆಯನ್ನು ವಿತರಿಸಿದರೂ ಸಹ, ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳಲು ಅವರು 2022ರವರೆಗೂ ಎದುರು ನೋಡಬೇಕಾಗುತ್ತದೆ.

ಕೊವಿಡ್-19 ಲಸಿಕೆ ವಿತರಣೆಯಲ್ಲಿ ಎಷ್ಟು ಹಂತಗಳು?

                         ಕೊವಿಡ್-19 ಲಸಿಕೆ ವಿತರಣೆಯಲ್ಲಿ ಎಷ್ಟು ಹಂತಗಳು?

      ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿತ್ತು.

ಎಷ್ಟು ಜನರಿಗೆ ಕೊರೊನಾವೈರಸ್ ಲಸಿಕೆ ವಿತರಣೆ?

                  ಎಷ್ಟು ಜನರಿಗೆ ಕೊರೊನಾವೈರಸ್ ಲಸಿಕೆ ವಿತರಣೆ?

        ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 59,08,440 ಮಂದಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 297 ದಿನಗಳಾಗಿದ್ದು, ಸೋಮವಾರ ರಾತ್ರಿ 7 ಗಂಟೆ ವೇಳೆಗೆ 54,10,680 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿತ್ತು. ಈ ಪೈಕಿ 1570163 ಮಂದಿಗೆ ಮೊದಲ ಡೋಸ್ ಹಾಗೂ 3840517 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಭಾರತದಲ್ಲಿ ಈವರೆಗೂ 1,09,08,16,356 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದ್ದು, 74,19,42,904 ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದರೆ, 34,83,20,761 ಮಂದಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.

              ಭಾರತದಲ್ಲಿ ನವೆಂಬರ್ 8ರ ಅಂಕಿ-ಅಂಶಗಳ ಪ್ರಕಾರ, ಕೇಂದ್ರ ಸರ್ಕಾರದಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1,16,89,46,235 ಡೋಸ್ ಕೊರೊನಾವೈರಸ್ ಲಸಿಕೆಯನ್ನು ಸರಬರಾಜು ಮಾಡಲಾಗಿದೆ. ಈ ಪೈಕಿ 15,92,74,731 ಡೋಸ್ ಲಸಿಕೆಯ ಲಭ್ಯತೆಯಿದ್ದು, ಉಳಿದ ಲಸಿಕೆಯನ್ನು ಈಗಾಗಲೇ ಬಳಕೆ ಮಾಡಿಕೊಳ್ಳಲಾಗಿದೆ.

ಹಂತವಾರು ಲಸಿಕೆ ವಿತರಣೆ ಪ್ರಮಾಣ ಎಷ್ಟಿದೆ?

ಹಂತವಾರು ಲಸಿಕೆ ವಿತರಣೆ ಪ್ರಮಾಣ ಎಷ್ಟಿದೆ?

            ಕೊರೊನಾವೈರಸ್ ಎರಡನೇ ಅಲೆಯಲ್ಲಿ ಅತಿಹೆಚ್ಚು ಸೋಂಕು ತಗುಲಿರುವುದು ಹಾಗೂ ಸಾವಿನ ಸಂಖ್ಯೆಯಲ್ಲಿ ಅತಿಹೆಚ್ಚು ಮಧ್ಯವಯಸ್ಕರ ಸಂಖ್ಯೆಯೇ ಹೆಚ್ಚಾಗಿದೆ. 1,03,79,710 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 92,76,993 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,83,72,915 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 1,60,55,735 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.

           ಭಾರತದಲ್ಲಿ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ 42,57,31,873 ಮಂದಿಗೆ ಕೊವಿಡ್-19 ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, 15,42,10,931 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ 17,66,75,231 ಜನರಿಗೆ ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ಹಾಗೂ 10,01,10,611 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. ಅದೇ ರೀತಿ 60 ವರ್ಷ ಮೇಲ್ಪಟ್ಟ 11,07,83,175 ಮಂದಿಗೆ ಮೊದಲ ಡೋಸ್ ಲಸಿಕೆ ನೀಡಿದರೆ, 6,86,66,491 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ಎಷ್ಟಿದೆ?

                            ದೇಶದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ಎಷ್ಟಿದೆ?

             ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಚೇತರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 10,126 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಈ ಅಂಕಿ-ಸಂಖ್ಯೆಯು 266 ದಿನಗಳಲ್ಲೇ ಕನಿಷ್ಠ ಎನಿಸಿದೆ. ಇದೇ ಅವಧಿಯಲ್ಲಿ 332 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದರೆ, 11,982 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 1,40,638 ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೂ 4,61,389 ಮಂದಿ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ.

         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries