ಕಾಸರಗೋಡು: ಕಾಸರಗೋಡಿನ ಕನ್ನಡ ಅಸ್ಮಿತೆಯ ಕಾಪಿಡುವ ಪೂರಕ ಚಟುವಟಿಕೆಗಳಲ್ಲಿ ಸುಧೀರ್ಘ ಕಾಲದಿಂದಲೂ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಸಮರ್ಥ ಕೊಡುಗೆಗಳು ಗಮನಾರ್ಹವಾದುದು. ಗಡಿನಾಡಿನ ನಾಡು-ನುಡಿಗೆ, ಸಾಮಾಜಿಕ ಏಕತೆಗೆ ಸಂಘಟನಾತ್ಮಕ ಶಕ್ತಿ ಸಂಚಯನ ಮತ್ತು ಯುವಜನರನ್ನು ಪಾಲ್ಗೊಳಿಸಿ ಪರಂಪರೆಯನ್ನು ದಾಟಿಸುವ ಚಿಂತನೆಗಳು ಬಲಗೊಳ್ಳಬೇಕು ಎಂದು ಧಾರ್ಮಿಕ, ಸಾಂಸ್ಕøತಿಕ ನೇತಾರ ಕೆ.ಎನ್ ವೆಂಕಟರಮಣ ಹೊಳ್ಳ ಕಾಸರಗೋಡು ಅವರು ತಿಳಿಸಿದರು.
ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಗುರುವಾರ ನಡೆದ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ 31ನೇ ಸಂಸ್ಥಾಪನಾ ದಿನಾಚರಣೆ ಮತ್ತು ಶಿವರಾಮ ಕಾಸರಗೋಡು ಅವರ 56ರ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾಷೆ, ಸಾಂಸ್ಕøತಿಗಳಿಗೆ ಬೆಂಬಲ ನಿತ್ಯ ನಿರಂತರವಾದಾಗ ಅದರ ಬೆಳವಣಿಗೆಗೆ ಪೂರಕವಾಗುತ್ತದೆ. ಯುವ ತಲೆಮಾರುಗಳಿಗೆ ತಪ್ಪಿಹೋಗುವ ಪರಂಪರೆಯ ನಡೆಗಳನ್ನು ಪರಿಚಯಿಸುವ ಆಂತರಂಗಿಕ ತುಡಿತಗಳನ್ನು ಸಾಕಾರಗೊಳಿಸುವ ಶಿವರಾಮ ಕಾಸರಗೋಡು ಅವರ ತುಡಿತ ಅಪೂರ್ವವಾದ ಕಾರ್ಯಯೋಜನೆಗಳ ಮೂಲಕ ಸಾಕಾರಗೊಳ್ಳುತ್ತಿದೆ. ಸಮಾಜ ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದವರು ತಿಳಿಸಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಸಂಸ್ಥಾಪಕ, ಸಂಘಟಕ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಜಿಲ್ಲಾಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾಸರಗೋಡು ನಗರಸಭೆ ಕೌನ್ಸಿಲರ್ ಶಾರದಾ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ರಾಜ್ಯ ವಕ್ತಾರ ವಿಶಾಲಾಕ್ಷ ಪುತ್ರಕಳ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ, ಆಯಿಷಾ ಎ.ಎ.ಪೆರ್ಲ ಉಪಸ್ಥಿತರಿದ್ದು ಶುಭಹಾರೈಸಿದರು.
ಕಾರ್ಯಕ್ರಮದ ಮೊದಲಿಗೆ ಶಿವರಾಮ ಕಾಸರಗೋಡು ಅವರ 56ನೇ ಜನ್ಮ ದಿನದ ಅಂಗವಾಗಿ ತೆಂಗಿನ ಗಿಡಗಳನ್ನು ನೆಡಲಾಯಿತು. ಜೊತೆಗೆ 56 ಹಣತೆಗಳನ್ನು ಬೆಳಗಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದುರ್ಷಿ ಅನುಪಮಾ ರಾಘವೇಂದ್ರ ಉಡುಪಮೂಲೆ ಅವರ ಭೂಮಿಕಾ ಪ್ರತಿಷ್ಠಾನದ ವಿದ್ಯಾರ್ಥಿಗಳಾದ ವೈಷ್ಣವಿ ಹೇರಳ, ವೈಷ್ಣವಿ ವಿ, ಶ್ರೀನಂದಾ ಎಂ. ಅವರಿಂದ ಭಾವಗೀತೆಗಳ ಗಾಯನ ನಡೆಯಿತು. ಬಳಿಕ ಶ್ಯಾಮಲಾ ರವಿರಾಜ್ ಕುಂಬಳೆ, ರವೀಂದ್ರನ್ ಪಾಡಿ, ಜಯಾನಂದ ಕುಮಾರ್ ಹೊಸದುರ್ಗ ಹಾಗೂ ಪುರುಷೋತ್ತಮ ಭಟ್ ಕೆ ಅವರು ಸ್ವರಚಿತ ಕವನಗಳನ್ನು ವಾಚಿಸಿದರು. ಶಿವರಾಮ ಕಾಸರಗೋಡು ಅವರನ್ನು ನಾಗರಿಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಹಾಗೂ ಗಾಯನ ಕಾರ್ಯಕ್ರಮ ನಡೆಯಿತು. ಜಗದೀಶ ಕೂಡ್ಲು ಸ್ವಾಗತಿಸಿ, ವಂದಿಸಿದರು. ಪುರುಷೋತ್ತಮ ಭಟ್ ಕೆ ಹಾಗೂ ಕಾವ್ಯ ಕುಶಲ ಕಾರ್ಯಕ್ರಮ ನಿರೂಪಿಸಿದರು.