ನವದೆಹಲಿ: ರೈತರ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕಾಗಿ ರೂಪಿಸಲಾಗಿರುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಕೆಲವೇ ದಿನಗಳಲ್ಲಿ 'ಕೃಷಿ ಕಾಯ್ದೆಗಳ ರದ್ದತಿ ಮಸೂದೆ 2021'ಕ್ಕೆ ಸಂಪುಟ ಅನುಮೋದನೆ ನೀಡಿದೆ.
'ನಾವು ಏನೇ ಮಾಡಿದರೂ ರೈತರಿಗಾಗಿ ಮಾಡಿದ್ದೇವೆ. ನಾವು ಮಾಡುತ್ತಿರುವುದು ದೇಶಕ್ಕಾಗಿ, ಈ ತಿಂಗಳಿನಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ' ಪ್ರಕಟಿಸಿದ್ದರು.
ಹೊಸ ಮಸೂದೆಯನ್ನು ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ. ಅಧಿವೇಶನ ನವೆಂಬರ್ 29ರಂದು ಆರಂಭವಾಗಲಿದ್ದು, ಡಿ. ೨೩ರವರೆಗೆ ಚಳಿಗಾಲದ ಸಂಸತ್ ಅಧಿವೇಶನ ನಡೆಯಲಿದೆ.
ಕಾಯ್ದೆ ವಾಪಸ್ ವರೆಗೂ ಪ್ರತಿಭಟನೆ ಮುಂದುವರಿಕೆ ಎಂದಿದ್ದ ರೈತರು
ಇನ್ನು ರೈತ ನಾಯಕರು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಸಂಬಂಧ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೂ ಹೋರಾಟ ಮುಂದುವರೆಸಲು ತೀರ್ಮಾನಿಸಿದ್ದಾರೆ. ಇತ್ತೀಚಿಗೆ ಲಖನೌದಲ್ಲಿ ನಡೆದ ರೈತ ಪಂಚಾಯತ್ ಸಭೆಯಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಸಮರ್ಪಕ ಕಾನೂನು ರೂಪಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.