ಚಂಡಿಗಢ: ದಿಲ್ಲಿ ಗಡಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದವರಲ್ಲಿ ಹೆಚ್ಚಿನವರು ಶ್ರೀಮಂತ ರೈತರು ಎಂಬ ಪ್ರತಿಪಾದನೆಗೆ ವಿರುದ್ಧವಾಗಿ ಪ್ರತಿಭಟನೆ ಸಂದರ್ಭ ಮೃತಪಟ್ಟ ರೈತರಿಗೆ ಸರಾಸರಿ 2.94 ಎಕರೆಗಿಂತ ಹೆಚ್ಚು ಭೂಮಿ ಇಲ್ಲ ಎಂದು ಪಾಟಿಯಾಲದ ಪಂಜಾಬ್ ವಿಶ್ವವಿದ್ಯಾನಿಲಯಕ್ಕೆ ಸೇರಿದ ಇಬ್ಬರು ಅರ್ಥಶಾಸ್ತ್ರಜ್ಞರು ನಡೆಸಿದ ಅಧ್ಯಯನ ಬಹಿರಂಗಗೊಳಿಸಿದೆ.
ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕನಿಷ್ಠ 600 ರೈತರು ಮೃತಪಟ್ಟಿದ್ದಾರೆ.
''ಗುತ್ತಿಗೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ಮೃತಪಟ್ಟ ಭೂರಹಿತ ರೈತರನ್ನು ಸೇರಿಸಿದರೆ, ರೈತರ ಸರಸಾರಿ ಕೃಷಿ ಭೂಮಿ ಕೇವಲ 2.26 ಎಕರೆ'' ಎಂದು ಪಂಜಾಬ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ನಿವೃತ್ತ ಪ್ರಾದ್ಯಾಪಕ ಲಖ್ವಿಂದರ್ ಸಿಂಗ್ ಹಾಗೂ ಪಂಜಾಬ್ ವಿಶ್ವವಿದ್ಯಾನಿಲಯದ ಬಥಿಂಡಾದಲ್ಲಿರುವ ಗುರು ಕಾಶಿ ಕ್ಯಾಂಪಸ್ನ ಸಾಮಾಜ ವಿಜ್ಞಾನದ ಸಹಾಯಕ ಪ್ರಾದ್ಯಾಪಕ ಬಲ್ದೇವ್ ಸಿಂಗ್ ಶೇರ್ಗಿಲ್ ಅವರ ಅಧ್ಯಯನ ಬಹಿರಂಗಗೊಳಿಸಿದೆ.
ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟ 600 ರೈತರಲ್ಲಿ 460 ರೈತರ ದತ್ತಾಂಶಗಳನ್ನು ಈ ಅಧ್ಯಯನ ಆಧಾರವಾಗಿ ಹೊಂದಿದೆ. ಅಧ್ಯಯನ ನಡೆಸುವ ಸಂದರ್ಭ ಮೃತಪಟ್ಟ ರೈತರ ಕುಟುಂಬಗಳ ಸದಸ್ಯರು ವೈಯುಕ್ತಿಕವಾಗಿ ನಮ್ಮನ್ನು ಸಂಪರ್ಕಿಸಿದರು ಎಂದು ಸಿಂಗ್ ಹೇಳಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಸಂದರ್ಭ ಪ್ರಾಣ ಕಳೆದಕೊಂಡವರು ಸಣ್ಣ, ಸಾಧಾರಣ ಹಾಗೂ ಭೂರಹಿತ ರೈತರು ಎಂದು ಅಧ್ಯಯನ ಸೂಚಿಸಿದೆ. ಈ ಅಧ್ಯಯನದಲ್ಲಿ ಪಂಜಾಬ್ನಲ್ಲಿ ಪ್ರದೇಶವಾರು ಭಾಗವಹಿಸುವಿಕೆ ಹಾಗೂ ಮೃತಪಟ್ಟವರ ಸಂಖ್ಯೆಯನ್ನು ತಿಳಿಸಿದೆ. ಇಲ್ಲಿನ ಮಾಲ್ವಾ ವಲಯದಿಂದ ಅತ್ಯಧಿಕ ರೈತರು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಇಲ್ಲಿನ ಅತ್ಯಧಿಕ ಸಂಖ್ಯೆಯ ರೈತರು ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ಹೇಳಿದೆ.