ಜೈಪುರ: ರಾಜಸ್ಥಾನ ರಾಜ್ಯ ಸಂಪುಟದ 15 ಮಂದಿ ಹೊಸ ಸಚಿವರುಗಳು ಭಾನುವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುವರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಪುಟ ಪುನರ್‌ರಚನೆ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ.
ರಾಜಸ್ಥಾನದ ಹೊಸ ಸಚಿವ ಸಂಪುಟವು 11 ಮಂದಿ ಹೊಸಬರನ್ನು ಒಳಗೊಳ್ಳಲಿದೆ. ಇದರಲ್ಲಿ ಸಚಿನ್ ಪೈಲಟ್ ಬಣದ 5 ಮಂದಿ ಕೂಡ ಸೇರಿರುತ್ತಾರೆ. 2018ರ ಡಿಸೆಂಬರ್‌ನಲ್ಲಿ ಅಶೋಕ್ ಗೆಹಲೋತ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸಂಪುಟ ಪುನರ್‌ರಚನೆ ಆಗುತ್ತಿದೆ.
ಸಚಿವರುಗಳಾದ ಗೋವಿಂದ್ ಸಿಂಗ್, ಹರೀಶ್ ಚೌಧರಿ ಮತ್ತು ರಘು ಶರ್ಮಾ ಅವರನ್ನು ಸಂಪುಟದಿಂದ ಕೈಬಿಡಲಾಗಿದ್ದು ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ರಾಜ್ಯ ಖಾತೆ ಸಚಿವರುಗಳಾಗಿದ್ದ ಮಮತಾ ಭೂಪೇಶ್, ಟಿಕಾರಾಂ ಜುಲ್ಲಿ ಮತ್ತು ಭಜನ್ ಲಾಲ್ ಜತಾವ್ ಅವರು ಸಂಪುಟ ದರ್ಜೆಯ ಸಚಿವರುಗಳಾಗಲಿದ್ದಾರೆ.
ಗೋವಿಂದ್ ಸಿಂಗ್, ಹರೀಶ್ ಚೌಧರಿ ಮತ್ತು ರಘು ಶರ್ಮಾ ಅವರು ಶುಕ್ರವಾರ ರಾಜೀನಾಮೆ ನೀಡಿದ್ದರು. ಇವರು ಪಕ್ಷದ ವಿವಿಧ ಹುದ್ದೆಗಳಲ್ಲಿ ಸ್ಥಾನ ಪಡೆದಿದ್ದಾರೆ. ಈ ಕಾರಣ ಒಬ್ಬರಿಗೆ ಒಂದು ಸ್ಥಾನ ಸೂತ್ರದಡಿ ಇವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಘು ಶರ್ಮಾ ಅವರು ಗುಜರಾತ್ ರಾಜ್ಯಕ್ಕೆ ಎಐಸಿಸಿ ಉಸ್ತುವಾರಿಯಾಗಿದ್ದರೆ, ಹರೀಶ್ ಚೌಧರಿ ಅವರು ಪಂಜಾಬ್ ಎಐಸಿಸಿ ಉಸ್ತುವಾರಿ ಹೊಣೆ ಹೊತ್ತಿದ್ದಾರೆ. ಗೋವಿಂದ್ ಸಿಂಗ್ ಅವರು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಅಶೋಕ್ ಗೆಹಲೋತ್ ನೇತೃತ್ವದ ಕಾಂಗ್ರೆಸ್ ಸರ್ಕಾರವು, ರಾಜೀನಾಮೆ ನೀಡಿದ 18 ಸಚಿವರು ಸೇರಿದಂತೆ ಒಟ್ಟು 30 ಸಚಿವರುಗಳನ್ನು ಹೊಂದಿರಲಿದೆ.