ಭೋಪಾಲ್ : ಮಧ್ಯಪ್ರದೇಶ ತನ್ನ ಬುಡಕಟ್ಟು ಯೋಧರಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ವಾರ ಭೋಪಾಲ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಕಾರ್ಯಕ್ರಮಕ್ಕಾಗಿ ರಾಜ್ಯ ಸರ್ಕಾರವು ಖರ್ಚು ಮಾಡುತ್ತಿರುವ ಮೊತ್ತ ಸಾಕಷ್ಟು ಸುದ್ದಿ ಆಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಲ್ಕು ಗಂಟೆಗಳ ಭೇಟಿ ಕಾರ್ಯಕ್ರಮಕ್ಕೆ ಮಧ್ಯಪ್ರದೇಶ ಸರ್ಕಾರವು ಬರೋಬ್ಬರಿ 23 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದೆ. 1 ತಾಸು 15 ನಿಮಿಷಗಳ ಭಾಷಣಕ್ಕಾಗಿ ಐದು ಗುಮ್ಮಟದ ವೇದಿಕೆ ನಿರ್ಮಿಸಲಾಗಿದೆ.
ಮಧ್ಯಪ್ರದೇಶ ಸರ್ಕಾರವು ಈ ಕಾರ್ಯಕ್ರಮಕ್ಕಾಗಿ ಒಟ್ಟು 23 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದ್ದು, ಈ ಪೈಕಿ 13 ಕೋಟಿ ಹಣವನ್ನು ಜಾಂಬೂರಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜನರನ್ನು ಕರೆ ತರುವುದಕ್ಕಾಗಿಯೇ ವೆಚ್ಚ ಮಾಡಲಾಗುತ್ತಿದೆ.
ಭಗವಾನ್ ಬಿರ್ಸಾ ಮುಂದಾ ಸ್ಮರಣಾರ್ಥ ಕಾರ್ಯಕ್ರಮ
ಮಧ್ಯಪ್ರದೇಶದಲ್ಲಿ ನವೆಂಬರ್ 15ರಂದು ಭಗವಾನ್ ಬಿರ್ಸಾ ಮುಂಡಾ ಸ್ಮರಣಾರ್ಥ ಜಂಜಾಟಿಯ ಗೌರವ್ ದಿವಸ್ ಅನ್ನು ಆಚರಿಸಲಾಗುತ್ತಿದೆ. ಈ ವೇಳೆ ಪ್ರಧಾನಿ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದರ ಜೊತೆ ನಗರದ ಜಂಬೂರಿ ಮೈದಾನದಲ್ಲಿ ದೇಶದ ಮೊದಲ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಹಬೀಬ್‌ಗಂಜ್ ರೈಲು ನಿಲ್ದಾಣ ಬಗ್ಗೆ ತಿಳಿಯಿರಿ
ಮಧ್ಯಪ್ರದೇಶದ ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಪಿಪಿಪಿ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ನಿಲ್ದಾಣವು ಜರ್ಮನಿಯ ಹೈಡೆಲ್ಬರ್ಗ್ ರೈಲು ನಿಲ್ದಾಣದಂತೆಯೇ ಇದೆ. ನಿಲ್ದಾಣದ ನವೀಕರಣವನ್ನು ಜುಲೈ 2016 ರಲ್ಲಿ ಪ್ರಾರಂಭಿಸಲಾಗಿದ್ದು, ಮೂರು ವರ್ಷಗಳ ಗಡುವಿನೊಂದಿಗೆ 2017ರಲ್ಲಿ ಕೆಲಸ ಶುರು ಮಾಡಲಾಯಿತು. ಆಧುನಿಕ ನಿಲ್ದಾಣವು ಆಗಮನ ಮತ್ತು ನಿರ್ಗಮನದ ಆಧಾರದ ಮೇಲೆ ಪ್ರಯಾಣಿಕರನ್ನು ಪ್ರತ್ಯೇಕಿಸುತ್ತದೆ. ಪ್ಲಾಟ್‌ಫಾರ್ಮ್‌ಗಳು, ಲಾಂಜ್‌ಗಳು, ಕಾನ್‌ಕೋರ್ಸ್ ಮತ್ತು ಡಾರ್ಮಿಟರಿಗಳು ಮತ್ತು ವಿಶ್ರಾಂತಿ ಕೊಠಡಿಗಳಲ್ಲಿ ಕುಳಿತುಕೊಳ್ಳಲು ಸಾಕಷ್ಟು ವ್ಯವಸ್ಥೆಗಳಿವೆ. ಇದೇ ರೀತಿಯ ಹಲವಾರು ವೈಶಿಷ್ಟ್ಯಗಳನ್ನು ನೂತನ ರೈಲ್ವೆ ನಿಲ್ದಾಣ ಹೊಂದಿದೆ.
ಜಾಂಬೂರಿ ಮೈದಾನದಲ್ಲಿ ಬುಡಕಟ್ಟು ದಂತಕತೆಗಳ ಚಿತ್ರಣ
ಜಂಜಾಟಿಯ ಗೌರವ್ ದಿವಸ್‌ನ ಅಂಗವಾಗಿ, ಬಿರ್ಸಾ ಮುಂಡಾ ಮತ್ತು ಇತರ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಸ್ಮರಿಸಲು ನವೆಂಬರ್ 15 ರಿಂದ 22ರವರೆಗೆ ರಾಷ್ಟ್ರೀಯವಾಗಿ ಒಂದು ವಾರದ ಕಾರ್ಯಕ್ರಮಗಳನ್ನು ಆಯೋಜಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿತ್ತು. ಜಾಂಬೂರಿ ಮೈದಾನದ ವಿಸ್ತಾರವಾದ ಮೈದಾನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಆದಿವಾಸಿಗಳು ಸೇರುವ ಸಾಧ್ಯತೆಯಿದ್ದು, ಇಡೀ ಸ್ಥಳವನ್ನು ಬುಡಕಟ್ಟು ಕಲೆ ಮತ್ತು ಬುಡಕಟ್ಟು ದಂತಕಥೆಗಳ ಚಿತ್ರಗಳಿಂದ ಅಲಂಕರಿಸಲಾಗಿದೆ. ಒಂದು ವಾರದಿಂದ 300ಕ್ಕೂ ಹೆಚ್ಚು ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಗಿರಿಜನರಿಗಾಗಿ ದೊಡ್ಡ ದೊಡ್ಡ ಪಂಗಡಗಳನ್ನೂ ನಿರ್ಮಿಸಲಾಗಿದೆ.
ಈ ರೈಲು ನಿಲ್ದಾಣವು ವಿಶ್ವ ಪರಂಪರೆಯ ತಾಣಗಳಾದ ಸಾಂಚಿ ಸ್ತೂಪ, ಭೋಜ್‌ಪುರ ದೇವಸ್ಥಾನ, ಭೀಮೇಟ್ಕಾ, ಬಿರ್ಲಾ ಮಂಡಿ, ತವಾ ಅಣೆಕಟ್ಟು ಮತ್ತು ಬುಡಕಟ್ಟು ವಸ್ತುಸಂಗ್ರಹಾಲಯಗಳ ನೋಟವನ್ನು ಸಹ ಒದಗಿಸುತ್ತದೆ. ಯೋಜನಾ ನಿರ್ದೇಶಕ ಎಂ.ಡಿ. ಅಬು ಆಸಿಫ್ ಮಾತನಾಡಿ, ಇದು ಪಿಪಿಪಿ ಅಡಿಯಲ್ಲಿ ನಿರ್ಮಿಸಲಾದ ಭಾರತೀಯ ರೈಲ್ವೆಯ ಮೊದಲ ಯೋಜನೆಯಾಗಿದೆ. ನಿಲ್ದಾಣದಲ್ಲಿ ಆಹಾರ ವಲಯ, ಮಕ್ಕಳ ವಲಯ, ಮನರಂಜನಾ ವಲಯ ಮತ್ತು ಚಿಲ್ಲರೆ ವಲಯಗಳು ಇರುತ್ತದೆ ಎಂದು ಹೇಳಿದ್ದಾರೆ.
ಸಾರಿಗೆ, ಆಹಾರಕ್ಕೆ 12 ಕೋಟಿ ರೂಪಾಯಿ ಖರ್ಚು
ಮಧ್ಯಪ್ರದೇಶದ 52 ಜಿಲ್ಲೆಗಳಿಂದ ಆಗಮಿಸುವ ಜನರ ಸಾರಿಗೆ ಮತ್ತು ಆಹಾರ ಹಾಗೂ ವಸತಿ ವ್ಯವಸ್ಥೆಗಾಗಿ 12 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಅದೇ ರೀತಿ ಐದು ಗುಮ್ಮಟ, ಟೆಂಟ್‌ಗಳು, ಅಲಂಕಾರ ಮತ್ತು ಪ್ರಚಾರಕ್ಕಾಗಿ 9 ಕೋಟಿಗೂ ಹೆಚ್ಚು ಹಣ ವೆಚ್ಚವಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ 47 ಸ್ಥಾನಗಳನ್ನು ಮೀಸಲಿಡಲಾಗಿದೆ. 2008ರಲ್ಲಿ ಬಿಜೆಪಿ 29ರಲ್ಲಿ ಗೆದ್ದಿತ್ತು; 2013 ರಲ್ಲಿ ಈ ಸಂಖ್ಯೆ 31ರಷ್ಟು ಹೆಚ್ಚಾಯಿತು, ಆದರೆ 2018ರಲ್ಲಿ 47 ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ 16 ಸ್ಥಾನಗಳನ್ನು ಗೆದ್ದುಕೊಂಡಿತ್ತು.
2 ವರ್ಷಗಳಲ್ಲಿ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಹೆಚ್ಚಳ
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಅಥವಾ ಎನ್‌ಸಿಆರ್‌ಬಿ ಡೇಟಾ ಪ್ರಕಾರ, ಮಧ್ಯಪ್ರದೇಶದಲ್ಲಿ ಪರಿಶಿಷ್ಟ ಪಂಗಡಗಳ ವಿರುದ್ಧ ಅತಿಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 2,401 ಕೇಸ್ ದಾಖಲಾಗಿವೆ ಎಂಬ ಬಗ್ಗೆ ವರದಿಯಾಗಿದೆ. 2019 ರಲ್ಲಿ, ಈ ಸಂಖ್ಯೆಯು 1,922 ಆಗಿದ್ದರೆ, 2018ರಲ್ಲಿ ಇದು 1,868 ಆಗಿತ್ತು. ಎರಡು ವರ್ಷಗಳ ಅವಧಿಯಲ್ಲಿ ಬುಡಕಟ್ಟು ಜನರ ಮೇಲಿನ ದೌರ್ಜನ್ಯದಲ್ಲಿ ಶೇ 28ರಷ್ಟು ಏರಿಕೆಯಾಗಿದೆ.