ಕುಸಿತದ ಹಾದಿಯಲ್ಲಿದ್ದ ಕರಿ ಕಾಳು ಮೆಣಸು ಧಾರಣೆ ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೆಜಿಗೆ 430 ರೂ. ಗಡಿ ದಾಟಿದ್ದು, ಬೆಳೆ ಹಾಗೂ ಬೆಲೆ ನಷ್ಟದಿಂದ ಕಂಗಾಲಾಗಿರುವ ಕೃಷಿಕರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ತರಿಸಿದೆ.
ಏಳೆಂಟು ವರ್ಷಗಳ ಹಿಂದೆ ಕಾಳು ಮೆಣಸು ಧಾರಣೆ 750 ರೂ.ವರೆಗೂ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಬರೆದಿತ್ತು. ಅಂದು ಐದಾರು ತಿಂಗಳ ಕಾಲ ಉತ್ತಮ ಧಾರಣೆ ಇದ್ದುದರಿಂದ ಕೃಷಿಕರು ಫುಲ್ ಖುಷ್ ಆಗಿದ್ದರು. ಒಂದಿಷ್ಟು ಲಾಭವೂ ಆಗಿತ್ತು. ಆದರೆ ಬಳಿಕ ಕಾಳು ಮೆಣಸು ಧಾರಣೆ ಹಠಾತ್ ಕುಸಿದು 250 ರೂ.ಗೆ ಇಳಿದಿತ್ತು.
ಇತ್ತೀಚಿನ ಒಂದೆರಡು ವರ್ಷಗಳಿಂದ 380 ರೂ.ನಿಂದ 390 ರೂ. ಆಸುಪಾಸಿನಲ್ಲೇ ಬೆಲೆ ಇತ್ತು. ಕರಿ ಮೆಣಸು ಧಾರಣೆ ಕಳೆದೊಂದು ತಿಂಗಳಿನಿಂದ ಜಿಗಿತ ಕಂಡಿದೆ. ಸೆಪ್ಟೆಂಬರ್ ಅಂತ್ಯದಲ್ಲಿ 400 ರೂ. ಗಡಿ ದಾಟಿದ ಧಾರಣೆ, ಈ ವಾರದ ಖಾಸಗಿ ಮಾರುಕಟ್ಟೆಯಲ್ಲಿ 430 ರಿಂದ 435 ರೂ. ದರದಲ್ಲಿ ಖರೀದಿಯಾಗುತ್ತಿದೆ.ಕಳೆದ ಒಂದೇ ವಾರದ ಅವಧಿಯಲ್ಲಿ 20 ರೂ. ಏರಿಕೆಯಾಗಿದ್ದು, ಇದು ಇನ್ನಷ್ಟು ಏರಿಕೆಯಾಗುವ ಮುನ್ಸೂಚನೆ ನೀಡಿದೆ. ಕರಿ ಮೆಣಸು ಸರಿಯಾಗಿ ಒಣಗಿಸಿ ಪ್ಯಾಕ್ ಮಾಡಿ ಇಟ್ಟರೆ ಕೆಲವು ವರ್ಷಗಳವರೆಗೆ ಸ್ಟಾಕ್ ಇಡಬಹುದಾಗಿದೆ. ಕೃಷಿಕರಿಗೆ ಬೆಳೆ ಹಾಳಾಗುವ ಭಯ ಇಲ್ಲದೇ ಇರುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಧಾರಣೆ ಇಲ್ಲದೆ ಯಾರೂ ತರಾತುರಿಯಲ್ಲಿ ಮಾರಲು ಮುಂದಾಗುವುದಿಲ್ಲ.
ಮಾರುಕಟ್ಟೆಯಲ್ಲಿ ಏರಿಕೆ ಕಾಣದ ಹೊರತಾಗಿ ಕೃಷಿಕರು ಕರಿ ಮೆಣಸು ಮಾರದೆ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳುತ್ತಾರೆ. ವಿದೇಶದಿಂದ ಕಳಪೆ ಕಾಳು ಮೆಣಸು ಆಮದು ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ ನಾಲ್ಕೈದು ವರ್ಷದಿಂದ ಕರಿ ಮೆಣಸಿನ ದರ ಕುಸಿತವಾಗುತ್ತಿದೆ. ಆದರೆ ದೇಶೀ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಮೂರು ವರ್ಷ ಹಿಂದೆ ಕೇಂದ್ರ ಸರಕಾರ ವಿದೇಶದಿಂದ ಆಮದಾಗುವ ಕರಿ ಮೆಣಸಿಗೆ ಕನಿಷ್ಠ 500 ರೂ. ದರ ವಿಧಿಸಿ ಆದೇಶ ಹೊರಡಿಸಿತ್ತು.
ಕರಿ ಮೆಣಸು ಮಾರುಕಟ್ಟೆಯಲ್ಲಿ ಸದ್ಯ ಧಾರಣೆ ಏರುಗತಿಯಲ್ಲಿ ಸಾಗುತ್ತಿದೆ. ನಾಲ್ಕು ವರ್ಷದ ಬಳಿಕ 400 ರೂ. ಗಡಿ ದಾಟಿದ್ದು, ತಕ್ಕಮಟ್ಟಿಗೆ ಉತ್ತಮ ಧಾರಣೆ ಇದೆ. ಆದರೆ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಭೀತಿ ಕೃಷಿಕರನ್ನು ಕಾಡುತ್ತಿದೆ. "ಮಾರುಕಟ್ಟೆಯಲ್ಲಿ ಸದ್ಯ 430 ರಿಂದ 435 ರೂ. ವರೆಗೆ ಧಾರಣೆ ಇದ್ದರೂ ಬೆಳೆ ನಷ್ಟದಿಂದ ಕೃಷಿಕರಿಗೆ ದೊಡ್ಡ ಲಾಭ ಆಗುವುದಿಲ್ಲ. ಮಾರುಕಟ್ಟೆಯಲ್ಲಿ ಧಾರಣೆ ಇನ್ನಷ್ಟು ಏರಿಕೆ ಕಾಣುವ ಮುನ್ಸೂಚನೆ ಇದೆ," ಎಂದು ಕರಿ ಮೆಣಸು ಬೆಳೆಗಾರರ ಸಮನ್ವಯ ಸಮಿತಿಯ ಮುಖಂಡ ವಿಶ್ವನಾಥ. ಕೆ. ತಿಳಿಸಿದ್ದಾರೆ.