ನವದೆಹಲಿ: ವಿಶೇಷ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್(Supreme Court)ತನ್ನ ವಿಶೇಷ ಅಧಿಕಾರ (Special Power) ಬಳಸಿ ಬಡ ದಲಿತ ವಿದ್ಯಾರ್ಥಿಗೆ ಐಐಟಿ ಬಾಂಬೇ (IIT Bombay) ಶೈಕ್ಷಣಿಕ ಸಂಸ್ಥೆಯಲ್ಲಿ ಅಡ್ಮಿಷನ್ ಮಾಡಿಸಿದ ಘಟನೆ ನಡೆದಿದೆ.
ದಲಿತ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕಾಗಿ ಸುಪ್ರೀಂಕೋರ್ಟ್ ತನ್ನ ವಿಶೇಷ ಅಧಿಕಾರ ಬಳಸಿದ್ದು, ಸಂವಿಧಾನದ 142 ನೇ ವಿಧಿಯ ಅಡಿ ಸ್ಪೇಷಲ್ ಪವರ್ ಬಳಸಿ ದಲಿತ ವಿದ್ಯಾರ್ಥಿಗೆ ಪ್ರವೇಶ ನೀಡುವಂತೆ ಐಐಟಿ-ಬಾಂಬೆಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ. ಉತ್ತರ ಪ್ರದೇಶದ ಹಳ್ಳಿಗಾಡಿನಿಂದ ಬಂದಂಥಹ ದಲಿತ ವಿದ್ಯಾರ್ಥಿಯ ಪ್ರಕರಣ ಇದಾಗಿದ್ದು, ಉನ್ನತ ವಿದ್ಯಾಭ್ಯಾಸದ ಆಕಾಂಕ್ಷೆ ಹೊಂದಿದ್ದ ವಿದ್ಯಾರ್ಥಿ, ತಾಂತ್ರಿಕ ಸಮಸ್ಯೆಗಳಿಂದ ಗಡುವಿನೊಳಗೆ ತನ್ನ ಶುಲ್ಕ ಪಾವತಿ ಮಾಡಲು ಆಗಿರಲಿಲ್ಲ. ಇಂಥ ವಿದ್ಯಾರ್ಥಿಗೆ 48 ಗಂಟೆಯೊಳಗೆ ಅಡ್ಮಿಶನ್ ಮಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಐಐಟಿ ಬಾಂಬೆಗೆ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ಪೀಠದ ಮುಂದೆ ಈ ಪ್ರಕರಣ ಬಂದಿತ್ತು. ಈ ವೇಳೆ ವಾದ ವಿವಾದ ಆಲಿಸಿದ ನ್ಯಾಯಮೂರ್ತಿಗಳು, ‘‘ಒಂದು ವೇಳೆ ಇಂಥ ಸಮಸ್ಯೆ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿದ್ದರೆ ನಗರದಿಂದ ಬರುವವರಿಗೆ ಮಾತ್ರ ಐಐಟಿ ಸೀಟುಗಳು ಮೀಸಲೇ?.. ಗ್ರಾಮೀಣ ಪ್ರದೇಶಗಳಿಂದ ಬರುವ ಅನೇಕ ವಿದ್ಯಾರ್ಥಿಗಳು ಇಂಟರ್ನೆಟ್ ದೋಷಗಳಿಂದ ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಲು ಕಷ್ಟಪಡುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ನಿರಾಕರಿಸಲಾಗುವುದಿಲ್ಲ ಎಂದು ಹೇಳಿತು. ಅಲ್ಲದೆ ಬುಧವಾರದ ಮೊದಲು ವಿದ್ಯಾರ್ಥಿಯನ್ನು ಸಿವಿಲ್ ಎಂಜಿನಿಯರಿಂಗ್ ಬಿಟೆಕ್ ಕೋರ್ಸ್‌ಗೆ ಸೇರಿಸುವಂತೆ ನ್ಯಾಯಾಲಯ ಐಐಟಿಗೆ ಆದೇಶ ನೀಡಿತು.
ಹಾಗಾದ್ರೆ ವಿದ್ಯಾರ್ಥಿ ಎದುರಿಸಿದ ಸಮಸ್ಯೆ ಎಂಥದ್ದು?
ಪ್ರಿನ್ಸ್ ಜೈಬೀರ್ ಸಿಂಗ್ ಅಲಹಾಬಾದ್‌ನಲ್ಲಿ ಅಧ್ಯಯನ ಮಾಡಿ, ಐಐಟಿ-ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಈ ದಲಿತ ವಿದ್ಯಾರ್ಥಿ 25, 864 ರಾಂಕ್ ಪಡೆದುಕೊಂಡಿದ್ದರು. ಹಿಂದುಳಿದ ಜಾತಿಯ ವಿದ್ಯಾರ್ಥಿಗಳ ಲಿಸ್ಟ್ ನಲ್ಲಿ ಪ್ರಿನ್ಸ್ 864ನೇ ಅಂಕ ಪಡೆದುಕೊಂಡಿದ್ದರು. ಇದಾದ ಬಳಿಕ ಜೈಬೀರ್ ಗೆ ಅಕ್ಟೋಬರ್ 27 ರಂದು ಸಿವಿಲ್ ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ಸೀಟು ಪಡೆದುಕೊಂಡರು. ಆನ್‌ಲೈನ್ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಐಐಟಿ ಬಾಂಬೆಯ ಪೋರ್ಟಲ್ ಅಕ್ಟೋಬರ್ 31 ರವರೆಗೆ ತೆರೆದಿತ್ತು. ಈ ಸಮಯದಲ್ಲಿ, ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸಬೇಕು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕೆಂದು ಸೂಚಿಸಲಾಗಿತ್ತು. ಅದರಂತೆ ಅಕ್ಟೋಬರ್ 29 ರಂದು ಜೈಬೀರ್, ಐಐಟಿ ಪೋರ್ಟಲ್‌ಗೆ ಲಾಗ್ ಇನ್ ಮಾಡಿ ಅಗತ್ಯ ದಾಖಲೆ ಅಪ್‌ಲೋಡ್ ಮಾಡಿದ್ದರು. ಆದರೆ, ಹಣದ ಕೊರತೆಯಿಂದ ಶುಲ್ಕ ಪಾವತಿಸಲು ಸಾಧ್ಯವಾಗಲಿಲ್ಲ. ಜೈಬೀರ್ ತನ್ನ ಸಹೋದರಿಯಿಂದ ಹಣ ಪಡೆದು ಅಕ್ಟೋಬರ್ 30 ರಂದು ಶುಲ್ಕ ಪಾವತಿ ಮಾಡಲು ಮುಂದಾಗುತ್ತಾನೆ. ಆದರೆ 10ರಿಂದ 12 ಬಾರಿ ಪ್ರಯತ್ನಿಸಿದ್ರೂ ತಾಂತ್ರಿಕ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲ. ತನ್ನ ಛಲ ಬಿಡದ ಜೈಬಿರ್, ಅಕ್ಟೋಬರ್ 31 ರಂದು ಸೈಬರ್ ಕೆಫೆಗೆ ತೆರಳಿ ಪ್ರಯತ್ನಿಸಿದರೂ ತಾಂತ್ರಿಕ ಸಮಸ್ಯೆ ಮುಂದುವರಿದಿತ್ತು.
ಇದಾದ ಬಳಿಕ ಜೈಬೀರ್, ಅಕ್ಟೋಬರ್ 31 ಹಾಗೂ ನವೆಂಬರ್ 1ರ ನಡುವೆ ಹಲವಾರು ಬಾರಿ ಇನ್ಸ್ಟಿಟ್ಯೂಟ್ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಇದರಲ್ಲೂ ಆತ ಸಫಲನಾಗಲಿಲ್ಲ. ನಂತರ ವಿದ್ಯಾರ್ಥಿ, ಅಲಹಾಬಾದ್‌ನಿಂದ ಖರಗ್‌ಪುರದ ಸೆಂಟ್ರಲಾಯ್ಸಡ್ ಅಡ್ಮಿಶನ್ ಅಥಾರಿಟಿ ಅಧಿಕಾರಿಗಳನ್ನು ಭೇಟಿ ಮಾಡುತ್ತಾನೆ. ಅಲ್ಲಿಯೂ ಫಲ ಸಿಗುವುದಿಲ್ಲ. ಇದಾದ ನಂತರ ವಿದ್ಯಾರ್ಥಿ ಬಾಂಬೆಗೆ ಹೋಗಿ ಅಲ್ಲಿನ ಹೈಕೋರ್ಟ್‌ನ ಸಹಾಯವನ್ನು ಕೋರುತ್ತಾನೆ. ಆದರೆ, ಈ ವಿಷಯದಲ್ಲಿ ಯಾವುದೇ ನಿರ್ದೇಶನ ನೀಡಲು ಹೈಕೋರ್ಟ್ ನಿರಾಕರಿಸುತ್ತದೆ. ಬಾಂಬೆ ಹೈಕೋರ್ಟ್ ಅರ್ಜಿಯನ್ನು ಆಲಿಸಲು ನಿರಾಕರಿಸಿದ್ದರಿಂದ ಸುಪ್ರೀಂ ಕೋರ್ಟ್ ಈಗ ಅವರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತು. ಅಲ್ಲದೆ ಸಂವಿಧಾನದ 142 ನೇ ವಿಧಿಯನ್ನು ಬಳಸಿ ವಿದ್ಯಾರ್ಥಿಗೆ ನೋಂದಣಿ ಮಾಡಿಸಲು ಆದೇಶ ನೀಡಿದೆ.
ಹಲವು ಪ್ರಮುಖ ಪ್ರಕರಣಗಳಲ್ಲಿ ವಿಶೇಷಾಧಿಕಾರ ಬಳಕೆ
ಈ ನಿಬಂಧನೆಯನ್ನು ಈ ಹಿಂದೆ ಹಲವಾರು ಪ್ರಮುಖ ಪ್ರಕರಣಗಳಲ್ಲಿ ಅನ್ವಯಿಸಲಾಗಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಉನ್ನತ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ, ಹಾಗೂ ಆ ಪ್ರಕರಣದ ಕ್ರಿಮಿನಲ್ ವಿಚಾರಣೆಯನ್ನು ರಾಯ್ ಬರೇಲಿಯಿಂದ ಲಖನೌಗೆ ವರ್ಗಾಯಿಸುವ ಪ್ರಕರಣದಲ್ಲಿ ಮತ್ತು 1989 ರಲ್ಲಿ ಭೋಪಾಲ್ ಅನಿಲ ದುರಂತದಿಂದ ಸಂತ್ರಸ್ತರಾದ ಸಾವಿರಾರು ಜನರಿಗೆ ಪರಿಹಾರ ಒದಗಿಸುವ ಪ್ರಕರಣದಲ್ಲಿ ಮತ್ತು 2014 ರಲ್ಲಿ 1993 ರಿಂದ ಮಂಜೂರಾದ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯನ್ನು ರದ್ದುಗೊಳಿಸುವ ಪ್ರಕರಣದಲ್ಲಿ ಬಳಸಲಾಗಿತ್ತು.
ಸಂವಿಧಾನದ 142ನೇ ವಿಧಿಯ ವಿಶೇಷತೆ ಏನು?
ಆರ್ಟಿಕಲ್ 142 ರ ಅಡಿಯಲ್ಲಿ ವಿಶೇಷ ಪ್ರಕರಣಗಳಲ್ಲಿ ಯಾವುದೇ ಕಾನೂನನ್ನು ಮಾಡದಿದ್ದರೂ ಸಂಪೂರ್ಣ ನ್ಯಾಯದ ವ್ಯಾಖ್ಯಾನದ ಅಡಿಯಲ್ಲಿ, ಉನ್ನತ ನ್ಯಾಯಾಲಯವು ಆರ್ಟಿಕಲ್ 142 ಅನ್ನು ಬಳಸಿಕೊಂಡು ಆದೇಶ ನೀಡಬಹುದು. ರಾಮಮಂದಿರ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ಈ ಅಧಿಕಾರ ಬಳಸಿ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಭೂಮಿ ಮಂಜೂರು ಮಾಡುವಂತೆ ಆದೇಶ ಹೊರಡಿಸಿತ್ತು.