ತಿರುವನಂತಪುರ: ಕೇರಳ ರಾಜ್ಯದಲ್ಲಿ ಕಾಡು ಮೃಗಗಳ ಆಕ್ರಮಣದಿಂದಾಗಿ ಮೃತಪಟ್ಟವರಲ್ಲಿ ಮೂರು ಪಟ್ಟು ಮಂದಿ ಹಾವು ಕಡಿತದಿಂದಲೇ ಸಾಯುತ್ತಿರುವುದಾಗಿ ಅಂಕಿ ಅಂಶಗಳು ತಿಳಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಕೇರಳ ರಾಜ್ಯದಲ್ಲಿ 435 ಮಂದಿ ಹಾವು ಕಡಿತಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಆದರೆ ಈ ಐದು ವರ್ಷಗಳಲ್ಲಿ ಕಾಡು ಮೃಗಗಳ ಹಾವಳಿಗೆ 160 ಮಂದಿ ಬಲಿಯಾಗಿದ್ದಾರೆ. ಈ ಲೆಕ್ಕಾಚಾರ ಪ್ರಕಾರ 93 ಮಂದಿ ಹಾವು ಕಡಿತಕ್ಕೊಳಗಾಗಿದ್ದು, 43 ಮಂದಿ ಕಾಡು ಮೃಗಗಳ ಹಾವಳಿಗೆ ಬಲಿಯಾಗಿದ್ದಾರೆ. ತ್ರಿಶ್ಯೂರು ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 86 ಮಂದಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ. ಕಾಡು ಮೃಗಗಳ ಹಾವಳಿಯಿಂದ 11 ಮಂದಿ ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹಾವು ಕಡಿತದಿಂದ ಮೃತಪಟ್ಟವರ ಸಂಖ್ಯೆ ಹೀಗಿದೆ. ತಿರುವನಂತಪುರದಲ್ಲಿ 23 ಮಂದಿ ಹಾವು ಕಡಿತದಿಂದ ಮೃತಪಟ್ಟಿದ್ದು, 8 ಮಂದಿ ಕಾಡು ಮೃಗಗಳ ಹಾವಳಿಗೊಳಗಾಗಿದ್ದಾರೆ. ಕೊಲ್ಲಂನಲ್ಲಿ 22 ಮಂದಿ ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದು, 4 ಮಂದಿ ಕಾಡು ಮೃಗಗಳಿಗೆ ಬಲಿಯಾಗಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯಲ್ಲಿ 18 ಮಂದಿ ಹಾವು ಕಡಿತಕ್ಕೊಳಗಾಗಿದ್ದು, 4 ಮಂದಿ ಕಾಡು ಮೃಗಗಳ ಆಕ್ರಮಣಕ್ಕೊಳಗಾಗಿದ್ದಾರೆ. ಆಲಪ್ಪುಯದಲ್ಲಿ 17 ಮಂದಿ ಹಾವು ಕಡಿತಕ್ಕೊಳಗಾಗಿದ್ದಾರೆ. ಕೋಟ್ಟಯಂನಲ್ಲಿ 17 ಮಂದಿ ಹಾವು ಕಡಿದು ಮೃತಪಟ್ಟಿದ್ದು, ಒಬ್ಬರು ಕಾಡು ಮೃಗಗಳ ಹಾವಳಿಗೊಳಗಾಗಿದ್ದಾರೆ. ಇಡುಕ್ಕಿಯಲ್ಲಿ 10 ಮಂದಿ ಹಾವು ಕಡಿತಕ್ಕೊಳಗಾಗಿದ್ದು, 24 ಮಂದಿ ಕಾಡು ಮೃಗಗಳ ಹಾವಳಿಗೊಳಗಾಗಿದ್ದಾರೆ. ಎರ್ನಾಕುಳಂ ಜಿಲ್ಲೆಯಲ್ಲಿ 15 ಮಂದಿ ಹಾವು ಕಡಿತಕ್ಕೊಳಗಾಗಿದ್ದು, ಇಬ್ಬರು ಕಾಡು ಮೃಗಗಳಿಗೆ ಬಲಿಯಾಗಿದ್ದಾರೆ. ಮಲಪ್ಪುರಂನಲ್ಲಿ 45 ಮಂದಿ ಹಾವು ಕಡಿತಕ್ಕೊಳಗಾಗಿದ್ದು, 17 ಮಂದಿ ಕಾಡುಮೃಗಗಳ ಹಾವಳಿಗೊಳಗಾಗಿದ್ದಾರೆ.
ಕೋಝಿಕ್ಕೊಡು ಜಿಲ್ಲೆಯಲ್ಲಿ17 ಮಂದಿ ಹಾವು ಕಡಿತಕ್ಕೊಳಗಾಗಿದ್ದು, ಇಬ್ಬರು ಕಾಡುಮೃಗಗಳ ಹಾವಳಿಗೊಳಗಾಗಿದ್ದಾರೆ. ಕಣ್ಣೂರು ಜಿಲ್ಲೆಯಲ್ಲಿ 40 ಮಂದಿ ಹಾವು ಕಡಿತದಿಂದ ಸಾವಿಗೀಡಾಗಿದ್ದು, 12 ಮಂದಿ ಕಾಡು ಮೃಗಗಳ ಹಾವಳಿಗೊಳಗಾಗಿದ್ದಾರೆ. ವಯನಾಡಿನಲ್ಲಿ 5 ಮಂದಿ ಹಾವು ಕಡಿತಕ್ಕೊಳಗಾಗಿದ್ದು, 25 ಮಂದಿ ಕಾಡು ಪ್ರಾಣಿಗಳ ಹಾವಳಿಗೊಳಗಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 13 ಮಂದಿ ಹಾವು ಕಡಿತದಿಂದ ಸತ್ತಿದ್ದು, 7 ಮಂದಿ ವನ್ಯಜೀವಿಗಳ ಹಾವಳಿಗೊಳಗಾಗಿದ್ದಾರೆ. ಐದು ವರ್ಷಗಳಲ್ಲಿ ಹಾವು ಕಡಿತಕ್ಕೊಳಗಾಗಿ ಹಾಗೂ ಕಾಡು ಮೃಗಗಳ ಆಕ್ರಮಣದಿಂದ 4160 ಮಂದಿ ಗಾಯಗೊಂಡಿದ್ದಾರೆ.
ಅರಣ್ಯದಲ್ಲಿ ಕಾಡು ಮೃಗಗಳ ಆಕ್ರಮಣದಿಂದ ಕೊಲೆಯಾದವರ ಸಂಬಂಧಿಕರಿಗೆ ಹತ್ತು ಲಕ್ಷ ರೂ. ಹಾಗೂ ಹಾವು ಕಡಿತಕ್ಕೊಳಗಾಗಿ ಮೃತಪಟ್ಟವರ ಆಪ್ತರಿಗೆ ಎರಡು ಲಕ್ಷ ರೂ. ನಷ್ಟಪರಿಹಾರ ನೀಡಲಾಗುತ್ತದೆ. ಅರಣ್ಯದ ಹೊರಗೆ ಹಾವು ಕಡಿತಕ್ಕೊಳಗಾಗಿ ಮೃತಪಟ್ಟರೆ ಒಂದು ಲಕ್ಷ ರೂ. ಲಭಿಸುತ್ತದೆ. ಹಾವು ಕಡಿತಕ್ಕೊಳಗಾಗಿ ಗಾಯಗೊಳ್ಳುವವರಿಗೆ ವೈದ್ಯಾಧಿಕಾರಿಯ ಪ್ರಮಾಣ ಪತ್ರದ ಆಧಾರದಲ್ಲಿ ಹಣ ನೀಡಲಾಗುತ್ತದೆ.