ನವದೆಹಲಿ:ಜಾಗತಿಕವಾಗಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ ಸೋಮವಾರ 50 ಲಕ್ಷ ದಾಟಿದೆ. ಬಹುತೇಕ ರಾಷ್ಟ್ರಗಳಲ್ಲಿ ಕೊರೊನಾ ನಿರೋಧಕ ಲಸಿಕೆಯ ಅಭಿಯಾನ ನಡೆಯುತ್ತಿದ್ದರೂ ಜಗತ್ತಿನಾದ್ಯಂತ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಭಾರತ ಸೇರಿ ಇತ್ತೀಚೆಗೆ ಕೆಲವು ರಾಷ್ಟ್ರಗಳಲ್ಲಿ ನಿತ್ಯ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಜಾಗತಿಕ ಸವಾಲು ಮುಗಿದಿಲ್ಲ
ಚೀನಾದಲ್ಲಿ 2019ರ ನವೆಂಬರ್‌ನಲ್ಲಿ ಕೊರೊನಾ ಮೊದಲ ಪ್ರಕರಣ ದಾಖಲಾಗಿತ್ತಲ್ಲದೆ, ಆ ದೇಶದಲ್ಲಿಯೇ 2020ರ ಜನವರಿ 11ರಂದು ಮೊದಲ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದರು. ಇದಾದ ಬಳಿಕ ಜಗತ್ತಿನಾದ್ಯಂತ ವಿಸ್ತರಿಸಿದ ಸೋಂಕಿನಿಂದ ಬಲಿಯಾದವರ ಸಂಖ್ಯೆ 50 ಲಕ್ಷ ದಾಟಿದೆ. ಭಾರತದಲ್ಲಿ ಮೊದಲ ಪ್ರಕರಣ 2020ರ ಜನವರಿ 27ರಂದು ಕೇರಳದಲ್ಲಿ ದಾಖಲಾಗಿದೆ. ಅಲ್ಲದೆ, ದೇಶದಲ್ಲಿಯೇ ಕರ್ನಾಟಕದಲ್ಲಿ ಮೊದಲ ಸಾವು ದಾಖಲಾಗಿದೆ. ಕಲಬುರಗಿಯಲ್ಲಿ ಮಾರ್ಚ್ 10 ರಂದು 76 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.
1.7 ಕೋಟಿ ಜನ ಸಾವು?
ತೆಲಂಗಾಣದಲ್ಲಿ ರಹಸ್ಯವಾಗಿ ಬೂಸ್ಟರ್ ಡೋಸ್ ನೀಡಿಕೆ
ಕೊರೊನಾ ಮೂರನೇ ಅಲೆ ಭೀತಿ, ಹಲವು ರೂಪಾಂತರಿಗಳು ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಬೂಸ್ಟರ್ ಡೋಸ್‌ಗೆ ಅನುಮತಿ ನೀಡದಿದ್ದರೂ ತೆಲಂಗಾಣದಲ್ಲಿ ಗುಪ್ತವಾಗಿ ಕೊರೊನಾ ನಿರೋಧಕ ಲಸಿಕೆಯ ಮೂರನೇ ಡೋಸ್ ಪಡೆಯುತ್ತಿರುವುದು ಬಹಿರಂಗವಾಗಿದೆ. ಬೂಸ್ಟರ್ ಡೋಸ್‌ಗೆ ಅನುಮತಿ ನೀಡದಿದ್ದರೂ, ಅದನ್ನು ನೀಡುವ ಕುರಿತು ಕೇಂದ್ರ ಸರಕಾರ ಮಾರ್ಗಸೂಚಿ ಪ್ರಕಟಿಸದಿದ್ದರೂ, ಆಸ್ಪತ್ರೆಗಳಿಗೆ ಇದನ್ನು ಪೂರೈಸದಿದ್ದರೂ ತೆಲಂಗಾಣದಲ್ಲಿ ನೂರಾರು ತಜ್ಞರು, ವೈದ್ಯರು, ಸುಶಿಕ್ಷಿತರು ರಹಸ್ಯವಾಗಿ ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ. 'ಸುಶಿಕ್ಷಿತರೇ ಹೆಚ್ಚಿನ ಸಂಖ್ಯೆಯಲ್ಲಿ ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ. ಕೇಂದ್ರ ಸರಕಾರವು ಆರೋಗ್ಯ ಕೇಂದ್ರಗಳಿಗೆ ಬೂಸ್ಟರ್ ಡೋಸ್ ಪೂರೈಸುತ್ತಿದ್ದರೂ, ಮೂರನೇ ಡೋಸ್ ಪಡೆದರೆ ಅದಕ್ಕೆ ಪ್ರಮಾಣ ಪತ್ರ ಸಿಗದಿದ್ದರೂ ಪಡೆಯುತ್ತಿದ್ದಾರೆ' ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಸಕ್ರಿಯ ಪ್ರಕರಣ 248 ದಿನದಲ್ಲೇ ಕನಿಷ್ಠ
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 12,514 ಕೊರೊನಾ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ 1,58,817ಕ್ಕೆ ಇಳಿಕೆಯಾಗಿದ್ದು, ಇದು 248 ದಿನಗಳಲ್ಲಿಯೇ ಕನಿಷ್ಠವಾಗಿದೆ. ಇನ್ನು ಒಂದು ದಿನದಲ್ಲಿ 251 ಜನ ಮೃತಪಟ್ಟಿದ್ದಾರೆ. ಸತತ 24 ದಿನಗಳಿಂದ ದೇಶದಲ್ಲಿ ನಿತ್ಯ ಸೋಂಕಿತರ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆ ಇದ್ದರೆ, ಸತತ 127 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಇದೆ.
ಕೊವ್ಯಾಕ್ಸಿನ್‌ಗೆ ಆಸ್ಪ್ರೇಲಿಯಾ ಅಸ್ತು
ಭಾರತದಲ್ಲಿಯೇ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಗೆ ಜಾಗತಿಕ ಅನುಮತಿ ನೀಡುವ ಕುರಿತು ನ.3ರಂದು ವಿಶ್ವ ಆರೋಗ್ಯ ಸಂಸ್ಥೆ ಸಭೆ ನಡೆಸುತ್ತಿರುವ ಬೆನ್ನಲ್ಲೇ ಇದಕ್ಕೆ ಆಸ್ಪ್ರೇಲಿಯಾ ಅನುಮತಿ ನೀಡಿದೆ. ಹಾಗಾಗಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಪಡೆದವರು ಇನ್ನು ಮುಂದೆ ಆಸ್ಪ್ರೇಲಿಯಾಗೆ ತೆರಳಬಹುದಾಗಿದೆ. ಅಲ್ಲದೆ, 14 ದಿನ ಕ್ವಾರಂಟೈನ್‌ನಲ್ಲಿ ಸಹ ಇರುವಂತಿಲ್ಲ. ಈಗಾಗಲೇ ಆಸ್ಪ್ರೇಲಿಯಾವು ಅಸ್ಟ್ರಾಜೆನಿಕಾದ ಕೋವಿಶೀಲ್ಡ್‌ಗೂ ಮಾನ್ಯತೆ ನೀಡಿದೆ. ಇದರ ಬೆನ್ನಲ್ಲೇ, ಭಾರತದ ಲಸಿಕೆ ಪ್ರಮಾಣ ಪತ್ರಕ್ಕೆ ಐದು ರಾಷ್ಟ್ರಗಳು ಮಾನ್ಯತೆ ನೀಡಿವೆ. 'ಮಂಗೋಲಿಯಾ, ಮಾರಿಷಸ್, ಎಸ್ಟೋನಿಯಾ, ಕಿರ್ಗಿಸ್ತಾನ ಹಾಗೂ ಸ್ಟೇಟ್ ಆಫ್ ಪ್ಯಾಲೆಸ್ತೀನ್ ರಾಷ್ಟ್ರಗಳು ಸಹ ಕೊವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಿವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.