HEALTH TIPS

5,240 ಕೋಟಿ ಮೊತ್ತದ ಬಿಟ್ ಕಾಯಿನ್‌ ವರ್ಗಾವಣೆ: ಕಾಂಗ್ರೆಸ್ ಮುಖಂಡ ಸುರ್ಜೇವಾಲಾ

                ನವದೆಹಲಿಕರ್ನಾಟಕದಲ್ಲಿ ನಡೆದಿರುವ ಬಹು ಕೋಟಿ ಮೌಲ್ಯದ ಬಿಟ್ ಕಾಯಿನ್ ಹಗರಣವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್‌ ಪಕ್ಷವು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

               ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಆಗ್ರಹಿಸಿದ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ, ಪ್ರಧಾನಿ ನರೇಂದ್ರ ಮೋದಿ ಅವರು 760 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ಈ ಹಗರಣದ ಸಮಗ್ರ ತನಿಖೆಗೆ ಆದೇಶ ನೀಡುವ ಬದಲು, 'ಈ ಕುರಿತ ಆರೋಪ ನಿರ್ಲಕ್ಷಿಸಿ' ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಯಹಸ್ತ ನೀಡುವ ಮೂಲಕ ಇಡೀ ಹಗರಣವನ್ನೇ ಮುಚ್ಚಿಹಾಕುತ್ತಿದ್ದಾರೆ ಎಂದು ದೂರಿದರು.

ಸ್ವತಂತ್ರ ಭಾರತದ 75 ವರ್ಷಗಳಲ್ಲಿ, ಅಂತರರಾಷ್ಟ್ರೀಯ ಮಟ್ಟದ ಆರ್ಥಿಕತೆಯನ್ನೇ ಬುಡಮೇಲು ಮಾಡಬಹುದಾದ ಅತಿ ದೊಡ್ಡ ಹಗರಣ ಇದಾಗಿದ್ದರೂ, ಈ ಕುರಿತು ಕೇಂದ್ರ ಸರ್ಕಾರವು ತಕ್ಷಣವೇ ಇಂಟರ್ ಪೋಲ್‌ಗೆ ಮಾಹಿತಿ ನೀಡಿರಲಿಲ್ಲ ಎಂದು ಅವರು ಆರೋಪಿಸಿದರು.

             ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಹಾಗೂ ಆತನ ಸಹಚರ ರಾಬಿನ್ ಖಂಡೇಲ್‌ವಾಲ್ ಎಂಬುವವನನ್ನು 2020ರ ನವೆಂಬರ್‌ 24ರಂದು ಬಂಧಿಸಿದ ಬೆಂಗಳೂರು ಪೊಲೀಸರು, ಶ್ರೀಕೃಷ್ಣನನ್ನು ಅಂದಾಜು 100 ದಿನಗಳ ಕಾಲ ತಮ್ಮ ವಶದಲ್ಲಿರಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. 5 ತಿಂಗಳ ನಂತರ 2021ರ ಏಪ್ರಿಲ್‌ 17ರಂದು ಆರೋಪಿ ಜಾಮೀನು ಪಡೆದಿದ್ದಾನೆ. 2021ರ ಏಪ್ರಿಲ್‌ 24ರಂದು ಕೇಂದ್ರ ಸರ್ಕಾರವು ಸಿಬಿಐನ ಒಬ್ಬ ಅಧಿಕಾರಿಯ ಮೂಲಕ ಇಂಟರ್ ಪೋಲ್‌ಗೆ ಈ ಕುರಿತ ಮಾಹಿತಿ ನೀಡಿದೆ ಎಂದು ಅವರು ವಿವರಿಸಿದರು.

                ಬಿಟ್ ಕಾಯಿನ್ ವ್ಯವಹಾರವು ಜಾಗತಿಕ ಅರ್ಥ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ. ಭಾರತದ ಆರ್ಥಿಕತೆಯ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಎಂದು ಸ್ವತಃ ಪ್ರಧಾನಿಯವರೇ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದರೂ, ಈ ಹಗರಣವನ್ನು ಮುಚ್ಚಿಟ್ಟಿದ್ದು ಏಕೆ? ಎಂದು ಸುರ್ಜೇವಾಲಾ ಪ್ರಶ್ನಿಸಿದರು.

              ವಿಭಿನ್ನ ದೇಶಗಳ ಬಿಟ್ ಕಾಯಿನ್ ಎಕ್ಸ್‌ಚೇಂಜ್ ವೆಬ್‌ಸೈಟ್‌ಗಳ ಅಕೌಂಟ್‌ಗಳು ಹಾಗೂ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪ್ರಕ್ರಿಯೆಯ ವೆಬ್‌ಸೈಟ್‌ಗಳಿಗೂ ಕನ್ನ ಹಾಕಿದ್ದಾಗಿ ತಿಳಿಸಿರುವ ಆರೋಪಿ, ಬಿಟ್ ಕಾಯಿನ್ ಕದ್ದಿದ್ದಾಗಿ ಒಪ್ಪಿದ್ದಾನೆ. ಆದರೆ, ಕೇಂದ್ರ ಹಾಗೂ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಹಗರಣದ ಪ್ರಮುಖ ಸಾಕ್ಷ್ಯಗಳನ್ನು ಮುಚ್ಚಿಟ್ಟಿದೆ ಎಂದು ಅವರು ಆರೋಪಿಸಿದರು.

                 ಒಟ್ಟು ಎಂಟು ಕಂಪೆನಿಗಳ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್‌ ಕಂಪೆನಿಗಳ ಅಕೌಂಟ್‌ಗಳನ್ನು ಹ್ಯಾಕ್ ಮಾಡಿದ್ದಾಗಿ ಶ್ರೀಕೃಷ್ಣ ಹೇಳಿಕೆ ನೀಡಿದ್ದಾನೆ. ಪ್ರತಿ ಬಿಟ್ ಕಾಯಿನ್‌ನ ಮೊತ್ತ ಈಗ ಅಂದಾಜು ₹ 51 ಲಕ್ಷದಷ್ಟಿದೆ. ಎರಡು ಹ್ಯಾಕಿಂಗ್‌ ಮೂಲಕ ಅಂಥ ಒಟ್ಟು 5,000 ಬಿಟ್ ಕಾಯಿನ್ ಕದ್ದಿದ್ದಾಗಿ ಆರೋಪಿ ಹೇಳಿದ್ದು, ಇತರ ಆರು ಹ್ಯಾಕಿಂಗ್‌ ಮೂಲಕ ಎಷ್ಟು ಬಿಟ್ ಕಾಯಿನ್ ಕದ್ದ ಎಂಬ ಮಾಹಿತಿ ದೊರೆತಿಲ್ಲ ಎಂದು ಅವರು ವಿವರ ನೀಡಿದರು.

           ವಿಶ್ವದ ಅನೇಕ ಹಣಕಾಸು ಸಂಸ್ಥೆಗಳ ವೆಬ್‌ಸೈಟ್‌ಗಳನ್ನೂ ಈತ ಹ್ಯಾಕ್ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಆದರೂ ಇಂಟರ್ ಪೋಲ್‌ಗೆ ತಕ್ಷಣ ಮಾಹಿತಿ ನೀಡಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಜಾರಿ ನಿರ್ದೇಶನಾಲಯಕ್ಕೆ ಏಕೆ ಮಾಹಿತಿ ನೀಡಿಲ್ಲ ಎಂದು ಅವರು ಕೇಳಿದರು.

ಕರ್ನಾಟಕದ ಈಗಿನ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರೇ ಈ ಪ್ರಕರಣ ಬೆಳಕಿಗೆ ಬಂದಾಗ ರಾಜ್ಯದ ಗೃಹ ಸಚಿವರಾಗಿದ್ದರು ಎಂಬುದು ಮುಖ್ಯ ಎಂದ ಸುರ್ಜೇವಾಲಾ, ಆರೋಪಿಯಿಂದ ವಶಕ್ಕೆ ಪಡೆದಿದ್ದ ₹ 9 ಕೋಟಿ ಮೊತ್ತದ 31 ಬಿಟ್ ಕಾಯಿನ್‌ಗಳು ನಾಪತ್ತೆಯಾಗಿವೆ ಎಂದು ಬೆಂಗಳೂರು ಪೊಲೀಸರು 2021ರ ಜನವರಿ 12ರಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೂ ಸರ್ಕಾರ ಏಕೆ ಸಮಗ್ರ ತನಿಖೆಗೆ ಆದೇಶ ನೀಡಲಿಲ್ಲ? ಎಂದು ಸವಾಲೆಸೆದರು.

            5,240 ಕೋಟಿ ಮೊತ್ತದ ಬಿಟ್ ಕಾಯಿನ್‌ ವರ್ಗಾವಣೆ: ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿರುವ ಹಾಗೂ ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಒಟ್ಟು ₹ 5,240 ಕೋಟಿ ಮೊತ್ತದ ಬಿಟ್ ಕಾಯಿನ್‌ಗಳನ್ನು ಎರಡು ದಿನಗಳಲ್ಲಿ ಬೇರೆಯವರ ಅಕೌಂಟ್‌ಗಳಿಗೆ ವರ್ಗಾಯಿಸಿಕೊಳ್ಳಲಾಗಿದೆ ಎಂದು ಅವರು ದೂರಿದರು.

ಈ ಮೊತ್ತವನ್ನು ಯಾರ ಖಾತೆಗೆ ವರ್ಗಾಯಿಸಲಾಗಿದೆ ಎಂಬ ಕುರಿತೂ ತನಿಖೆ ನಡೆಸುವ ಬದಲು, 'ಬಿಟ್ ಕಾಯಿನ್ ಹಗರಣದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ' ಎಂದು ಎರಡು ದಿನಗಳ ಹಿಂದಷ್ಟೇ ಪ್ರಧಾನಿಯವರೇ ಬೊಮ್ಮಾಯಿ ಅವರಿಗೆ ಅಭಯ ನೀಡಿರುವುದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದರು.

              ಅಂತರರಾಷ್ಟ್ರೀಯ ಮಟ್ಟದ ಈ ಹಗರಣವನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಹಾಗೂ, ಇಂಟರ್‌ಪೋಲ್ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಧಿಕಾರಿಗಳನ್ನು ಒಳಗೊಂಡ ತಂಡಕ್ಕೆ ತನಿಖೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಹಗರಣದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರ ಮಕ್ಕಳು ಭಾಗಿಯಾಗಿದ್ದಾರೆ ಎಂದು ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಆರೋಪಿಸಿದ್ದಾರೆ. ಹಾಗಾದರೆ, ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದ ಅವರು, ಈ ಹಗರಣ ಕುರಿತು ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಾಗ ತೀವ್ರ ಮುಜುಗರ ಅನುಭವಿಸಿದ್ದಾರೆ ಎಂದರು.

                           ಶ್ರೀಕೃಷ್ಣ ಹ್ಯಾಕ್ ಮಾಡಿರುವ ವಿವರ:

* ತನ್ನ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್‌ ಜಾಲಕ್ಕೆ 2016ರ ಆಗಸ್ಟ್‌ 2ರಂದು ಕನ್ನ ಹಾಕಿ 1.20 ಲಕ್ಷ ಬಿಟ್ ಕಾಯಿನ್ ಕಳವು ಮಾಡಲಾಗಿದೆ ಎಂದು ನೆದರ್ಲೆಂಡ್‌ನ ಆಯಮ್‌ಸ್ಟರ್‌ಡ್ಯಾಂ ಮೂಲದ 'ಬಿಟ್ ಫಿನೆಕ್ಸ್‌' ಎಂಬ ಹೆಸರಿನ ಸಂಸ್ಥೆ ಅಧಿಕೃತವಾಗಿ ಹೇಳಿಕೊಂಡಿದೆ. ಈ ಜಾಲದ ಮೂಲಕ 2000 ಬಿಟ್ ಕಾಯಿನ್ ಕದ್ದಿದ್ದಾಗಿ ಆರೋಪಿ ಹೇಳಿದ್ದಾನೆ.

* ರಷ್ಯಾ ಮೂಲದ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್‌ 'ಬಿಟಿಸಿ-ಇ' 2017ರ ಡಿಸೆಂಬರ್‌ನಲ್ಲಿ ಸ್ಥಗಿತಗೊಂಡಿದೆ. ಅಲ್ಲಿಂದ 3000 ಬಿಟ್ ಕಾಯಿನ್ ಕದ್ದಿದ್ದಾಗಿ ಆರೋಪಿ ಹೇಳಿದ್ದಾನೆ.

* ಲುಕ್ಸಂಬರ್ಗ್‌ನ 'ಸಿಸಿಇ ಬಿಟ್ ಸ್ಟ್ಯಾಂಪ್‌' ವೆಬ್‌ಸೈಟ್‌ಗೆ ಕನ್ನ ಹಾಕಿದ್ದಾಗಿ ಆರೋಪಿ ಹೇಳಿದ್ದಾನೆ ಎಷಇಟು ಕಾಯಿನ್ ಕದ್ದ ಎಂಬ ವಿವರವನ್ನು ಪೊಲೀಸರು ನೀಡಿಲ್ಲ.

* ಸಿ.ಸಿ. ಪೋರ್ಟಲ್ ಬಿಗ್ ಸೆಂಟರ್ ಡಾರ್ಕ್ ವೆಬ್‌ಗೂ ಕನ್ನ ಹಾಕಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬಿಟ್ ಕಾಯಿನ್ ಮೈನಿಂಗ್‌ ಪೂಲ್‌ ಅಥವಾ ಸ್ಲಷ್ ಪೂಲ್‌ನ ಅಕೌಂಟ್‌ಗೆ ಕನ್ನ ಹಾಕಿ ಕದ್ದಿದ್ದಾಗಿ ಆರೋಪಿ ಹೇಳಿದ್ದಾನೆ. ಮೊತ್ತ ಎಷ್ಟು ಎಂಬ ವಿವರ ಇಲ್ಲ.

* 59 ದೇಶಗಳ ಗ್ರಾಹಕರನ್ನು ಒಳಗೊಂಡಿರುವ 'ಸಿಸಿ ಕಾಯಿನ್ ಇಎಸ್‌ಎಲ್‌' ಅಕೌಂಟ್‌ ಅನ್ನೂ ಈತನೇ ಹ್ಯಾಕ್ ಮಾಡಿದ್ದು, ಕದ್ದ ವಿವರ ಇಲ್ಲ.

* 'ಸಿಸಿಇ ಪೇಟೀಸ್‌ ಎಂಪೆಕ್ಸ್‌', ಬಿಟ್ ಕಾಯಿನ್ ಸ್ಟಾಕ್ ಟ್ರೇಡಿಂಗ್‌ನ ಪ್ರಮುಖ ಪ್ಲಾಟ್‌ಫಾರ್ಮ್‌ ಎಂದೇ ಹೆಸರಾಗಿರುವ 'ಹ್ಯಾವ್ಲಾಕ್ ಇನ್ವ್‌ವೆಸ್ಟ್‌ಮೆಂಟ್ಸ್' ಹಾಗೂ 'ಬಿಟ್ ಕಾಯಿನ್ ಎಕ್ಸ್‌ಚೇಂಜ್‌ ಬಿಟಿಸಿ2ಪಿಎಂ.ಎಂಇ' ಅಕೌಂಟ್‌ಗಳಿಗೂ ಕನ್ನ ಹಾಕಲಾಗಿದೆ. ಆದರೆ ಕದ್ದ ಮೊತ್ತದ ವಿವರ ಇಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries