ನವದೆಹಲಿ: ಮಹಾರಾಷ್ಟ್ರದ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್‌ವೊಂದರ ಮೇಲೆ ಇತ್ತೀಚೆಗೆ ದಾಳಿ ನಡೆಸಲಾಗಿದ್ದು, ಖಾತೆಗಳನ್ನು ತೆರೆಯುವಲ್ಲಿ ಅಕ್ರಮ ನಡೆದಿರುವುದು ಕಂಡುಬಂದ ಕಾರಣ ₹ 53 ಕೋಟಿಗೂ ಹೆಚ್ಚು ಮೊತ್ತದ ಠೇವಣಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ.
ಅಕ್ಟೋಬರ್ 27 ರಂದು ಬ್ಯಾಂಕಿನ ಪ್ರಧಾನ ಕಚೇರಿ, ಅದರ ಅಧ್ಯಕ್ಷ ಹಾಗೂ ನಿರ್ದೇಶಕರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು ಎಂದು ಎಂದು ಇಲಾಖೆ ತಿಳಿಸಿದೆ.
ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ಬ್ಯಾಂಕ್‌ನ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ, ಬುಲ್ಡಾಣಾ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ವಿರುದ್ಧ ಇಲಾಖೆ ಕ್ರಮ ಜರುಗಿಸಿದೆ ಎಂದು ಮೂಲಗಳು ಹೇಳಿವೆ.
'ಪಾನ್ (ಶಾಶ್ವತ ಖಾತೆ ಸಂಖ್ಯೆ) ಇಲ್ಲದೆ ಬ್ಯಾಂಕಿನ ಈ ಶಾಖೆಯಲ್ಲಿ 1,200ಕ್ಕೂ ಹೆಚ್ಚು ಹೊಸ ಖಾತೆಗಳನ್ನು ತೆರೆಯಲಾಗಿದೆ. ತಲಾ ₹1.9 ಲಕ್ಷ ಮೊತ್ತದ ಹಲವು ಠೇವಣಿಗಳನ್ನು ಮಾಡಲಾಗಿದೆ. ಈ ಠೇವಣಿಗಳ ಒಟ್ಟು ಮೊತ್ತ ₹ 53.72 ಕೋಟಿ ಆಗುವುದು ಎಂದು ಇಲಾಖೆ ಆರೋಪಿಸಿದೆ.