ಲಖನೌ: ಉತ್ತರ ಪ್ರದೇಶದಲ್ಲಿ ನ.25 ರಂದು ಪ್ರಧಾನಿ ನರೇಂದ್ರ ಮೋದಿ ಜೇವರ್ ನಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ವಿಮಾನ ನಿಲ್ದಾಣದ ಮೂಲಕ ಉತ್ತರ ಪ್ರದೇಶ ದೇಶದಲ್ಲೇ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರಾಜ್ಯದಲ್ಲಿ ಈಗ 8 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು ಇನ್ನೂ 13 ವಿಮಾನ ನಿಲ್ದಾಣಗಳು 7 ಏರ್ ಸ್ಟ್ರಿಪ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ನ.25 ರಂದು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ಮಾಡುವ ಮೂಲಕ ಉತ್ತರ ಪ್ರದೆಶಕ್ಕೆ 5 ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಭ್ಯವಾಗಲಿದೆ, ದೇಶದಲ್ಲೇ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ರಾಜ್ಯವಾಗಿರಲಿದೆ ಉತ್ತರ ಪ್ರದೇಶ ಎಂದು ಬಿಜೆಪಿ ನೇತೃತ್ವದ ಸರ್ಕಾರ ತಿಳಿಸಿದೆ. 2012 ವರೆಗೂ ಉತ್ತರ ಪ್ರದೇಶದಲ್ಲಿ ಲಖನೌ ಮತ್ತು ವಾರಣಾಸಿಗಳಲ್ಲಿ ಮಾತ್ರವೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಇತ್ತು.
ಅಕ್ಟೋಬರ್ 20 ರಂದು ಕುಷಿನಗರ್ ನಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಇನ್ನು ರಾಮಜನ್ಮಭೂಮಿ ಇರುವ ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷ ಸೇವೆಗಳು ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆ ಇದೆ. 5 ನೇ ವಿಮಾನ ನಿಲ್ದಾಣ ಎನ್ ಸಿಆರ್ ನ ನೊಯ್ಡಾ ಬಳಿ ಇರುವ ಜೇವರ್ ನಲ್ಲಿ ತಲೆ ಎತ್ತುತ್ತಿದೆ.