ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೇರಲಿದೆ. ಈ ನಿಟ್ಟಿನಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ 5 ಕೋಟಿ ರೂ. ಮಂಜೂರು ಮಾಡಲಾಗಿದೆ.
ಕಾಸರಗೋಡು- ಕಾಞಂಗಾಡು ರಾಜ್ಯ ಹೆದ್ದಾರಿ ನಿರ್ಮಾಣ ಅಂಗವಾಗಿ ಕಾಸರಗೋಡು ರೈಲು ನಿಲ್ದಾಣ ಮತ್ತು ಆಸುಪಾಸಿನ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಈ ಯೋಜನೆಗೆ ತಾಂತ್ರಿಕ ಮಂಜೂರಾತಿ ನೀಡಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ರೈಲು ನಿಲ್ದಾಣದಿಂದ ತಾಯಲಂಗಾಡಿ ವರೆಗಿನ ಪ್ರದೇಶಗಳನ್ನು ನವೀಕರಣಗೊಳಿಸಲಾಗುವುದು. ಯೋಜನೆಯ ಅಂಗವಾಗಿ ರೈಲು ನಿಲ್ದಾಣದ ಮುಂಭಾಗದಲ್ಲಿ ಅತ್ಯಾದುನಿಕ ಬಸ್ ಗಾಗಿ ಕಾಯುವ ಮಮದಿಗೆ ತಂಗುದಾಣ, ಹಾದಿಬದಿ ಪ್ರಯಾಣಿಕರ ವಿಶ್ರಾಂತಿಗೆ ಉದ್ಯಾನ, ಉಳಿದೆಡೆ ಹೂದೋಟ, ಪಾಕಿರ್ಂಗ್ ಜಾಗಗಳಲ್ಲಿ ಕಿಯಾಸ್ಕ್ ಗಳನ್ನು ಸ್ಥಾಪಿಸಲಾಗುವುದು. ಅತ್ಯಧುನಿಕ ಲಘು ಉಪಹಾರ ಕೇಂದ್ರಗಳು, ರಸ್ತೆಗಳ ಉಭಯ ಕಡೆಗಳಲ್ಲಿ ಟೈಲ್ಸ್ ಬಳಸಿ ಕಾಲ್ನಡೆ ಹಾದಿ ನಿರ್ಮಿಸಲಾಗುವುದು. ಚರಂಡಿ, ಅತ್ಯಧುನಿಕ ಬೀದಿ ಬೆಳಕಿನ ವ್ಯವಸ್ಥೆ ಇತ್ಯಾದಿ ನಿರ್ಮಿಸಲಾಗುವುದು ಎಂದು ಸಭೆ ತಿಳಿಸಿದೆ.
ಸಭೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಹಣಕಾಸು ಅಧಿಕಾರಿ ಎಂ.ಶಿವಪ್ರಕಾಶ್, ಲೋಕೋಪಯೋಗಿ ಕಟ್ಟಡ ನಿರ್ಮಾಣ ವಿಭಾಗ ಕಾರ್ಯಕಾರಿ ಇಂಜಿನಿಯರ್ ಮುಹಮ್ಮದ್ ಮುನೀರ್, ಪಿ.ವಿನೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.