ನವದೆಹಲಿ: ಇದೀಗ ಅಸ್ತಿತ್ವದಲ್ಲಿರುವ 6,000 ಕ್ರಿಪ್ಟೋಕರೆನ್ಸಿಗಳಲ್ಲಿ, ಇನ್ಮುಂದೆ ಕೇವಲ ಒಂದು ಅಥವಾ ಎರಡು ಹೆಚ್ಚೆಂದರೆ ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಳ್ಳುತ್ತವೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಬುಧವಾರ ಹೇಳಿದ್ದಾರೆ.
"ಯಾವುದೇ ವಸ್ತುವಾಗಲಿ ಅದಕ್ಕೆ ಮೌಲ್ಯವಿದ್ದರೇ ಮಾತ್ರ ಬೆಲೆ ಇರುತ್ತದೆ. ಬಹಳಷ್ಟು ಕ್ರಿಪ್ಟೋಗಳು ಮೌಲ್ಯವನ್ನು ಹೊಂದಿವೆ. ಏಕೆಂದರೆ ಅವನ್ನು ಖರೀದಿಸಲು ಹೆಚ್ಚಿನ ಮೂರ್ಖರು ಸಿದ್ಧರಿದ್ದಾರೆ ಎಂದ ಆರ್‌ಬಿಐ ಮಾಜಿ ಗವರ್ನರ್, ಕ್ರಿಪ್ಟೋಕರೆನ್ಸಿಗಳಲ್ಲಿ ಪ್ರಸ್ತುತ ಉನ್ಮಾದವನ್ನು 17ನೇ ಶತಮಾನದಲ್ಲಿ ನೆದರ್ಲ್ಯಾಂಡ್ಸ್ನಲ್ಲಿನ ತುಲಿಪ್ ಉನ್ಮಾದಕ್ಕೆ ಹೋಲಿಸಿದರು.
ಕ್ರಿಪ್ಟೋಗಳು ಅನಿಯಂತ್ರಿತ ಚಿಟ್ ಫಂಡ್‌ಗಳಂತೆಯೇ ಸಮಸ್ಯೆಯನ್ನು ಉಂಟುಮಾಡಬಹುದು. ಚಿಟ್ ಫಂಡ್ಗಳು ಜನರಿಂದ ಹಣವನ್ನು ತೆಗೆದುಕೊಂಡು ಮೋಸ ಮಾಡುತ್ತಿವೆ. ಕ್ರಿಪ್ಟೋ ಆಸ್ತಿಯನ್ನು ಹೊಂದಿರುವ ಬಹಳಷ್ಟು ಜನರು ತೊಂದರೆಗೊಳಗಾಗುತ್ತಿದ್ದಾರೆ ಎಂದು ಅವರು ಹೇಳಿದರು.
ರಾಜನ್ ಪ್ರಕಾರ, ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಮೌಲ್ಯವಿಲ್ಲ ಎಂದಲ್ಲ. ಆದ್ರೆ ಅವುಗಳಲ್ಲಿ ಹೆಚ್ಚಿನವು ಶಾಶ್ವತ ಮೌಲ್ಯವನ್ನು ಹೊಂದಿಲ್ಲ. ಅಲ್ಲದೆ, ಕೆಲವು ಪಾವತಿಗಳನ್ನು ಮಾಡುವ ಮೂಲಕ ಮಾತ್ರ ಅವು ಉಳಿದುಕೊಳ್ಳಬಹುದಾಗಿದೆ. ವಿಶೇಷವಾಗಿ ಗಡಿಯಾಚೆಗಿನ ಪಾವತಿಗಳು.
ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ವ್ಯಕ್ತಿಗಳಲ್ಲಿ ರಾಜನ್ ಒಬ್ಬರೇ ಅಲ್ಲ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಬಗ್ಗೆ ಎಚ್ಚರಿಕೆಗಳನ್ನು ನೀಡಿದ್ದರು. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ನಿಯಂತ್ರಿಸಲು ಬಲವಾದ ಮತ್ತು ಔಪಚಾರಿಕ ಚೌಕಟ್ಟಿನ ಬಗ್ಗೆ ದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ- 2021 ಪರಿಚಯಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದರ ಜೊತೆಗೆ ಆರ್‌ಬಿಐ ಮೂಲಕ ಅಧಿಕೃತ ಡಿಜಿಟಲ್ ಕರೆನ್ಸಿ ಸೃಷ್ಟಿಗೆ ಬೇಕಾದ ಫ್ರೇಮ್‌ವರ್ಕ್ ಸಿದ್ಧತೆಗೂ ಈ ಕಾಯ್ದೆ ಅನುವುಮಾಡಿಕೊಡಲಿದೆ.
ಯುಎಸ್‌ನಲ್ಲಿ, ಕ್ರಿಪ್ಟೋ $2.5 ಟ್ರಿಲಿಯನ್ ಸಮಸ್ಯೆಯಾಗಿದ್ದು, ಯಾರೂ ನಿಜವಾಗಿಯೂ ನಿಯಂತ್ರಿಸಲು ಬಯಸುವುದಿಲ್ಲ ಎಂದು ರಾಜನ್ ಹೇಳಿದರು. ನಿಯಂತ್ರಕರು ಈ ಜಾಗವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದಿರುವುದು ಮತ್ತು ಅದನ್ನು ಹೇಗೆ ನಿಯಂತ್ರಿಸುವುದು ಎಂಬುದನ್ನು ತಿಳಿದುಕೊಳ್ಳದಿರುವುದು ಸಮಸ್ಯೆಗೆ ಭಾಗಶಃ ಕಾರಣವಾಗಿದೆ. ಕ್ರಿಪ್ಟೋ ಘಟಕಗಳಿಂದ ಮಾಹಿತಿಯನ್ನು ಪಡೆಯಲು ಸರ್ಕಾರಗಳು ಒತ್ತಾಯಿಸಬೇಕು ಎಂದು ಅವರು ಹೇಳಿದ್ದಾರೆ.