ನವದೆಹಲಿ: ಆಕಾಶದಲ್ಲಿ ವಿಮಾನಗಳ ಟ್ರಾಫಿಕ್ ಶುರುವಾಗಿದೆ. ವಿಮಾನಗಳ ಹಾರಾಟ ಶೇ.67ರಷ್ಟು ಹೆಚ್ಚಳವಾಗಿದೆ.
ದೇಶೀಯ ವೈಮಾನಿಕ ಕ್ಷೇತ್ರದಲ್ಲಿ ಕಡೆಗೂ ಚೇತರಿಕೆಯ ಎಲ್ಲಾ ಲಕ್ಷಣಗಳೂ ಗೋಚರಿಸಿವೆ. ವಿಮಾನಗಳ ಹಾರಾಟ ಪ್ರಮಾಣ ಅಕ್ಟೋಬರ್ ತಿಂಗಳಲ್ಲಿ ಶೇ.67 ಪ್ರತಿಶತ ಏರಿಕೆ ಕಂಡುಬಂದಿದೆ. ಒಟ್ಟು 88 ಲಕ್ಷ ವಿಮಾನ ಪ್ರಯಾಣಿಕರು ಹಾರಾಟ ನಡೆಸಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ವಿಮಾನ ಹಾರಾಟಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಆ ಹಿನ್ನೆಲೆಯಲ್ಲಿ ವೈಮಾನಿಕ ಹಾರಾಟ ಕ್ಷೇತ್ರ ತೀವ್ರ ನಷ್ಟಕ್ಕೆ ಗುರಿಯಾಗಿತ್ತು.
ಇದೀಗ ದೇಶೀಯ ವೈಮಾನಿಕ ಕ್ಷೇತ್ರ ಚೇತರಿಕೆಯ ಹಾದಿಯಲ್ಲಿದೆ. ಅದೇನೋ ಸರಿ ಆದರೆ ಈಗಲೂ ವಿಮಾನ ಕ್ಷೇತ್ರ ಇಂಧನ ಬೆಲೆಯೇರಿಕೆ ಸವಾಲನ್ನು ಎದುರಿಸುತ್ತಿದೆ. ಅಕ್ಟೋಬರ್ 18ರಂದು ಪೂರ್ಣ ಆಸನ ಸಾಮರ್ಥ್ಯದ ಪ್ರಯಾಣಿಕರನ್ನು ಒಯ್ಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.
ವಿಮಾನಯಾನ ಸಂಸ್ಥೆಗಳ ಅಕ್ಟೋಬರ್ 18 ರಿಂದ ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲದೆ ದೇಶಿ ವಿಮಾನಗಳು ಕಾರ್ಯಾಚರಣೆ ನಡೆಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿತ್ತು.
ನಾಗರಿಕ ವಿಮಾನಯಾನ ಸಚಿವಾಲಯ ದೇಶೀಯ ವಿಮಾನಗಳ ಶೇ. 100 ಸಾಮರ್ಥ್ಯಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಿತ್ತು.
ಸಚಿವಾಲಯವು ತನ್ನ ಆದೇಶದಲ್ಲಿ "ನಿಗದಿತ ದೇಶೀಯ ವಿಮಾನ ಕಾರ್ಯಾಚರಣೆಯನ್ನು ಅಕ್ಟೋಬರ್ 18, 2021 ರಿಂದ ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲದೆ ಪುನಃಸ್ಥಾಪಿಸಲು ನಿರ್ಧರಿಸಲಾಗಿದೆ" ಎಂದು ಹೇಳಿತ್ತು. ಅಂತೆಯೇ ಕಾರ್ಯಾಚರಣೆ ಆರಂಭಿಸಲಾಗಿದೆ.
ಸಚಿವಾಲಯದ ಆದೇಶದ ಪ್ರಕಾರ, ಸೆಪ್ಟೆಂಬರ್ 18 ರಿಂದ ವಿಮಾನಯಾನ ಸಂಸ್ಥೆಗಳು ತಮ್ಮ ಕೋವಿಡ್ ಪೂರ್ವ ದೇಶೀಯ ಸೇವೆಗಳಲ್ಲಿ ಶೇಕಡಾ 85 ರಷ್ಟು ಕಾರ್ಯನಿರ್ವಹಿಸುತ್ತಿವೆ.
ಆಗಸ್ಟ್ 12 ರಿಂದ ವಿಮಾನಯಾನ ಸಂಸ್ಥೆಗಳು ಶೇ. 72.5, ಜುಲೈ 5 ಮತ್ತು ಆಗಸ್ಟ್ 12 ರ ನಡುವೆ ಶೇ. 65 ರಷ್ಟಿತ್ತು. ಜೂನ್ 1 ಮತ್ತು ಜುಲೈ 5 ರ ನಡುವೆ ಶೇ. 50 ರಷ್ಟು ದೇಶಿ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದವು.
ಜೆಟ್ ಏರ್ವೇಸ್ 2022 ರ ಮೊದಲ ತ್ರೈಮಾಸಿಕದಿಂದ ದೇಶೀಯ ವಿಮಾನಯಾನ ಸೌಲಭ್ಯಗಳನ್ನು ಪುನಾರಂಭ ಮಾಡಲಿದೆ.
ಸಂಸ್ಥೆಯ ಅಂತಾರಾಷ್ಟ್ರೀಯ ವಿಮಾನಗಳ ಸೇವೆ 2022 ರ ಕೊನೆಯ ತ್ರೈಮಾಸಿಕದಿಂದ ಪ್ರಾರಂಭವಾಗಲಿದೆ ಎಂದು ಏರ್ಲೈನ್ಸ್ ನ ಬಿಡ್ಡರ್ ವಿಜೇತ ಜಲನ್ ಕಲ್ರಾಕ್ ಒಕ್ಕೂಟ ಮಾಹಿತಿ ನೀಡಿದೆ.
ಮೊದಲ ಜೆಟ್ ಏರ್ವೇಸ್ ದೆಹಲಿ-ಮುಂಬೈ ಮಾರ್ಗವಾಗಿ ಸಂಚರಿಸಲಿದೆ. ಏರ್ ಲೈನ್ಸ್ ನ ಕೇಂದ್ರ ಕಚೇರಿ ಮುಂಬೈ ಬದಲಿಗೆ ದೆಹಲಿಗೆ ವರ್ಗಾವಣೆಯಾಗಲಿದೆ ಎಂದೂ ಸಂಸ್ಥೆ ತಿಳಿಸಿದೆ.
ಜೆಟ್ ಏರ್ವೇಸ್ ಇನ್ಸಾಲ್ವೆನ್ಸಿ ಪ್ರಕ್ರಿಯೆಗೆ ಒಳಪಟ್ಟ ಕಾರಣ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ (ಎನ್ ಸಿಎಲ್ ಟಿ) ಈ ವರ್ಷದ ಜೂನ್ ನಲ್ಲಿ ಜನಲ್ ಕಾಲ್ರಾಕ್ ಒಕ್ಕೂಟದ ಪರಿಹಾರ ಯೋಜನೆಯನ್ನು ಅನುಮೋದಿಸಿತ್ತು. ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚಿನ ಏರ್ ಕ್ರಾಫ್ಟ್ ಗಳನ್ನು ಪ್ರಾರಂಭಿಸುವುದಕ್ಕೆ ಹಾಗೂ 5 ವರ್ಷಗಳಲ್ಲಿ 100 ಕ್ಕೂ ಹೆಚ್ಚು ವಿಮಾನಗಳನ್ನು ಪ್ರಾರಂಭಿಸುವುದಕ್ಕೆ ಜೆಟ್ ಏರ್ವೇಸ್ 2.0 ಯೋಜನೆ ಹೊಂದಿದೆ.