ಕಾಸರಗೋಡು: ಕೋವಿಡ್ ಮಹಾಮಾರಿಯ ಹಾವಳಿಯ ಪರಿಣಾಮ 19 ತಿಂಗಳ ಅವಧಿಯ ನಂತರ ಮತ್ತೆ ಶಾಲಾ ಚಟುವಟಿಕೆಗಳು ಆರಂಭಗೊಂಡಿವೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ದಿನವಾದ ಸೋಮವಾರ 69050 ಮಂದಿ ವಿದ್ಯಾರ್ಥಿಗಳು, 7781 ಮಂದಿ ಶಿಕ್ಷಕರು ಶಾಲೆಗಳಿಗೆ ಆಗಮಿಸಿದ್ದರು. ಪ್ರತಿ ತರಗತಿಗಳ ಅಧಾರ್ಂಶ ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು.
ಯಾವುದೇ ಆಕ್ಷೇಪಗಳಿಲ್ಲದೆ, ರಾಜ್ಯ ಸರಕಾರದ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಕಾಸರಗೋಡು ಜಿಲ್ಲೆಯಲ್ಲಿ ಶಿಕ್ಷಣಾಲಯಗಳು ಆರಂಭಗೊಂಡಿವೆ ಎಂದು ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ ತಿಳಿಸಿದರು. ನೀಲೇಶ್ವರದಿಂದ ಅಂಗಡಿಮೊಗರು ವರೆಗಿನ 15 ಶಾಲೆಗಳಿಗೆ ನೇರವಾಗಿ ತಾವು ಭೇಟಿ ನೀಡಿರುವುದಾಗಿ ಅವರು ತಿಳಿಸಿದರು.
ಕೋವಿಡ್ ಸಂದಿಗ್ಧತೆ ಹಿನ್ನೆಲೆಯಲ್ಲಿ ಒಂದುವರೆ ವರ್ಷ ಕಾಲ ಮುಚ್ಚುಗಡೆಗೊಂಡಿದ್ದ ಶಿಕ್ಷಣ ಸಂಸ್ಥೆಗಳು ಕೇರಳ ರಾಜ್ಯೋತ್ಸವ ದಿನವಾದ ಸೋಮವಾರ ಪುನರಾರಂಭಗೊಂಡಿದ್ದು, ಮಕ್ಕಳಿಗೆ ಸಂಭ್ರಮದ ಸ್ವಾಗತ ನೀಡಲಾಯಿತು. ಒಂದರಿಂದ ಪ್ಲಸ್‍ಟು ತರಗತಿ ವರೆಗಿನ ಜಿಲ್ಲೆಯ 725ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಎರಡುವರೆ ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತರಗತಿ ಪ್ರವೇಶಿಸಿದ್ದಾರೆ. ಮಕ್ಕಳೆಲ್ಲರೂ ಉತ್ಸಾಹದಿಂದ ಶಾಲೆಗೆ ಕಾಲಿರಿಸಿದರು. ಮಕ್ಕಳ ದೇಹತಾಪ ಪರಿಶೋಧನೆ ನಡೆಸಿ, ಸ್ಯಾನಿಟೈಸರ್ ನೀಡಿ ತರಗತಿಗೆ ಕಳುಹಿಸಲಾಯಿತು.
ಕೋವಿಡ್ ಸಂದಿಗ್ಧಾವಸ್ಥೆ ನಂತರ ಇದೇ ಮೊದಲ ಬಾರಿಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಚೆಂಡೆಮೇಳದೊಂದಿಗೆ ಬರಮಾಡಿಕೊಂಡು, ಹೂ ನೀಡಿ, ತಳಿರುತೋರಣಗಳಿಂದ ಅಲಂಕರಿಸಲಾದ ತರಗತಿಗೆ ಕರೆದೊಯ್ಯಲಾಯಿತು. ಶಾಲಾ ಶಿಕ್ಷಕವೃಂದ, ಪಿಟಿಎ, ಜನಪ್ರತಿನಿಧಿಗಳು, ಸಂಘಸಂಸ್ಥೆ ಪದಾಧಿಕಾರಿಗಳು ಮಕ್ಕಳನ್ನು ಬರಮಾಡಿಕೊಂಡರು. ಜಿಲ್ಲೆಯ ಶಾಲಾ ಕಟ್ಟಡಗಳ ತಪಾಸಣೆ ನಡೆಸಿ, ಫಿಟ್‍ನೆಸ್ ಸರ್ಟಿಫಿಕೇಟ್ ಲಭಿಸಿದ ಶಾಲೆಗಳಿಗೆ ಮಾತ್ರ ತೆರೆದು ಕಾರ್ಯಾಚರಿಸಲು ಅನುಮತಿ ನೀಡಲಾಗಿತ್ತು. ಜಿಲ್ಲೆಯ 32ಶಾಲಾ ಕಟ್ಟಡಗಳಿಗೆ ದಕ್ಷತೆ ಖಾತ್ರಿಯಿಲ್ಲದ ಕಾರಣ ಶಾಲೆ ತೆರೆದುಕಾರ್ಯಾಚರಿಸಿರಲಿಲ್ಲ. ಶಾಲಾ ಕಟ್ಟಡ ದುರಸ್ತಿ ನಡೆಸಿದ ನಂತರ ಶಾಲೆಗಳು ಕಾರ್ಯಾಚರಿಸಲಿದ್ದು, ಅಲ್ಲಿವರೆಗೆ ಇಲ್ಲಿನ ಮಕ್ಕಳಿಗೆ ಬದಲಿ ವ್ಯವಸ್ಥೆ ನಡೆಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.