ನವದೆಹಲಿ: ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಇಂದು ಶುಕ್ರವಾರ ಸಂವಿಧಾನ ದಿನ(ನ.26)ವನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಭಗವದ್ಗೀತೆಯ ಆಧುನಿಕ ಆವೃತ್ತಿಯಂತೆ ಭಾರತದ ಸಂವಿಧಾನವು ನಮ್ಮನ್ನು ರಾಷ್ಟ್ರದ ಪರವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ನಾವು ಪ್ರತಿಯೊಬ್ಬರೂ ದೇಶದ ಪರವಾಗಿ ಕೆಲಸ ಮಾಡಲು ಬದ್ಧರಾಗಿದ್ದರೆ ಒಂದೇ ಭಾರತ, ಶ್ರೇಷ್ಠ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಇದಕ್ಕೂ ಮುನ್ನ ಸಂವಿಧಾನದ ಪೀಠಿಕೆಯನ್ನು ಓದಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂವಿಧಾನ ಪೀಠಿಕೆಯನ್ನು ಓದಿದರು. ನಂತರ ಅದನ್ನು ಎಲ್ಲರೂ ಪುನರುಚ್ಛರಿಸಿದರು.