ನವದೆಹಲಿ : ಒಂದು ತಿಂಗಳ ಹಿಂದೆ ಶೇ.6.86ರಷ್ಟಿದ್ದ ಭಾರತದ ನಿರುದ್ಯೋಗ ದರವು ಅಕ್ಟೋಬರ್ ನಲ್ಲಿ ಶೇ.7.75ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಆಫ್ ಇಂಡಿಯನ್ ಇಕಾನಮಿ (ಸಿಎಂಐಇ) ತನ್ನ ವರದಿಯಲ್ಲಿ ತಿಳಿಸಿದೆ. ಅಕ್ಟೋಬರ್ ನಲ್ಲಿ ನಗರ ನಿರುದ್ಯೋಗ ದರವು ಮೂರು ತಿಂಗಳ ಕನಿಷ್ಠವಾದ ಶೇ.7.38ಕ್ಕೆ ತಗ್ಗಿದ್ದರೆ, ಗ್ರಾಮೀಣ ನಿರುದ್ಯೋಗ ದರವು ನಾಲ್ಕು ತಿಂಗಳ ಗರಿಷ್ಠ ಪ್ರಮಾಣವಾದ ಶೇ.7.91ಕ್ಕೆ ಜಿಗಿದಿದೆ.
ಸೆಪ್ಟಂಬರ್ ನಿಂದ ಅಕ್ಟೋಬರ್ ಗೆ ನಗರ ನಿರುದ್ಯೋಗ ದರದಲ್ಲಿ 124 ಮೂಲ ಅಂಕಗಳು ಕಡಿಮೆಯಾಗಿದ್ದರೂ ಗ್ರಾಮೀಣ ನಿರುದ್ಯೋಗ ದರದಲ್ಲಿ 175 ಮೂಲ ಅಂಕಗಳ ದಿಢೀರ್ ಹೆಚ್ಚಳದಿಂದಾಗಿ ದೇಶದ ಒಟ್ಟಾರೆ ನಿರುದ್ಯೋಗ ದರದಲ್ಲಿ ಏರಿಕೆಯಾಗಿದೆ ಎಂದು ವರದಿಯು ತಿಳಿಸಿದೆ.
ಉದ್ಯೋಗ ನಷ್ಟದ ತಕ್ಷಣದ ಅಂದಾಜನ್ನು ಸಿಎಂಐಇ ಒದಗಿಸಿಲ್ಲವಾದರೂ ಒಟ್ಟಾರೆ ನಿರುದ್ಯೋಗ ದರದಲ್ಲಿ ಏರಿಕೆಯಾಗಿರುವುದು ಅಕ್ಟೋಬರ್ ನಲ್ಲಿ ಸಾಕಷ್ಟು ಜನರು ನಿರುದ್ಯೋಗಿಗಳಾಗಿದ್ದರು ಎನ್ನುವುದನ್ನು ಸೂಚಿಸುತ್ತಿದೆ.
ಆಗಸ್ಟ್ ಗೆ ಹೋಲಿಸಿದರೆ ಸೆಪ್ಟಂಬರ್ ನಲ್ಲಿ ನಿರುದ್ಯೋಗ ದರದಲ್ಲಿ 146 ಮೂಲ ಅಂಕಗಳ ಇಳಿಕೆಯಾಗಿತ್ತು ಮತ್ತು ಉದ್ಯೋಗಗಳಲ್ಲಿ 85 ಲಕ್ಷದಷ್ಟು ಏರಿಕೆ ಕಂಡು ಬಂದಿತ್ತು. ಸೆಪ್ಟಂಬರ್ನಲ್ಲಿ ಒಟ್ಟು ಉದ್ಯೋಗಗಳ ಸಂಖ್ಯೆ 40.62 ಕೋ.ಆಗಿದ್ದು, ಇದು 2020 ಮಾರ್ಚ್ ನಲ್ಲಿ ದೇಶಕ್ಕೆ ಕೋವಿಡ್ ಆಘಾತದ ನಂತರ ಅತ್ಯಧಿಕವಾಗಿತ್ತು. ಆದರೂ ಈ ಸಂಖ್ಯೆಯು ಕೋವಿಡ್ ಪೂರ್ವದ ಉದ್ಯೋಗಗಳ ಸಂಖ್ಯೆ (40.89 ಕೋ.)ಗಿಂತ ಕಡಿಮೆಯೇ ಇತ್ತು.
ಅಕ್ಟೋಬರ್ ನಲ್ಲಿ ನಿರುದ್ಯೋಗ ದರದಲ್ಲಿ ಏರಿಕೆಯು ಸಿಎಂಐಇ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.
ಭಾರತವೀಗ ಹಬ್ಬಗಳ ಋತುವಿನ ಸಂಭ್ರಮದಲ್ಲಿದೆ ಮತ್ತು ಮುಂದಿನ ತಿಂಗಳುಗಳಲ್ಲಿ ಉದ್ಯೋಗಗಳು ಹೆಚ್ಚುವ ನಿರೀಕ್ಷೆಯಿದೆ ಎಂದು ಸಿಎಂಐಇ ಸಿಇಒ ಮಹೇಶ ವ್ಯಾಸ್ ಅವರು ಕಳೆದ ತಿಂಗಳು ಲೇಖನವೊಂದರಲ್ಲಿ ಆಶಯ ವ್ಯಕ್ತಪಡಿಸಿದ್ದರು.