ನವದೆಹಲಿ: ದೇಶದಲ್ಲಿ ಶೇ. 78 ರಷ್ಟು ವಯಸ್ಕರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, ಶೇ. 38 ರಷ್ಟು ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಹೇಳಿದ್ದಾರೆ.
ಇದೊಂದು ಅಸಾಧಾರಣ ಸಾಧನೆ ಎಂದು ಬಣ್ಣಿಸಿದ ಕೇಂದ್ರ ಆರೋಗ್ಯ ಸಚಿವರು, ಭಾರತವು ವೈರಸ್ ಅನ್ನು ಸೋಲಿಸುವ ಹಾದಿಯಲ್ಲಿ ಅತೀ ವೇಗವಾಗಿ ಮುನ್ನಡೆಯುತ್ತಿದೆ ಎಂದಿದ್ದಾರೆ.
ನಿನ್ನೆ ಬೆಳಗ್ಗೆ 7 ಗಂಟೆಗೆ ನವೀಕರಿಸಲಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ನೀಡಲಾದ ಒಟ್ಟು ಕೋವಿಡ್ ಲಸಿಕೆ ಪ್ರಮಾಣ 106.31 ಕೋಟಿ ಡೋಸ್ ಮೀರಿದೆ.
"ಇದು ರಾಷ್ಟ್ರದ ಅಸಾಧಾರಣ ಸಾಧನೆ! ಭಾರತವು ಅರ್ಹ ಜನಸಂಖ್ಯೆಯ ಶೇ. 78 ರಷ್ಟು ಮಂದಿಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ಮತ್ತು ಶೇ. 38 ರಷ್ಟು ಅರ್ಹ ಜನರಿಗೆ ಎರಡೂ ಡೋಸ್ ಲಸಿಕೆ ನೀಡಿದೆ. ನಾವು ಕೊರೋನಾ ಸೋಲಿಸುವ ಹಾದಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದು, ಎಲ್ಲರಿಗೂ ಅಭಿನಂದನೆಗಳು!" ಎಂದು ಮಾಂಡವಿಯಾ ಅವರು ಟ್ವೀಟ್ ಮಾಡಿದ್ದಾರೆ.