ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ವಾಯುಗುಣಮಟ್ಟ ಹದಗೆಟ್ಟಿರುವುದರಿಂದ ಇದನ್ನು ತಡೆಯುವ ಸಲುವಾಗಿ, ಡಿಸೆಂಬರ್ 7ರವರೆಗೆ ಕಟ್ಟಡ ನಿರ್ಮಾಣ ಕಾರ್ಯ ಹಾಗೂ ಟ್ರಕ್ಗಳ ರಾಜಧಾನಿ ಪ್ರವೇಶಕ್ಕೆ ದೆಹಲಿ ಸರ್ಕಾರ ನಿರ್ಬಂಧ ವಿಧಿಸಿದೆ.
ಅಗತ್ಯ ಸರಕುಗಳನ್ನು ತಲುಪಿಸುವ ಟ್ರಕ್‌ಗಳು, ಸಿಎನ್‌ಜಿ, ಇ-ಟ್ರಕ್‌ಗಳಿಗೆ ಈ ನೋ-ಎಂಟ್ರಿ ನಿರ್ದೇಶನದಿಂದ ವಿನಾಯಿತಿ ನೀಡಲಾಗಿದೆ.
ಮುಂದಿನ ಆದೇಶದವರೆಗೆ ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳ ಮೇಲಿನ ನಿಷೇಧ ಮುಂದುವರಿಯುತ್ತದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು ಸೋಮವಾರ ಹೇಳಿದ್ದಾರೆ.
ನಗರದಲ್ಲಿ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ" ಯಾಗಿರುವುದರಿಂದ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಾಮರ್ಶೆ ಸಭೆ ನಡೆಸಿದ ನಂತರ ಈ ಆದೇಶ ನೀಡಲಾಗಿದೆ.
ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವ ಕಾರಣ ಕಾರ್ಮಿಕರು ತೀವ್ರ ತೊಂದರೆಗೊಳಗಾಗಿದ್ದು, ಅವರಿಗೆ ಜೀವನ ನಡೆಸಲು ದೆಹಲಿ ಸರ್ಕಾರ ತಲಾ 5 ಸಾವಿರ ರೂ. ಪರಿಹಾರ ನೀಡುವುದಾಗಿ ಈಗಾಗಲೇ ಘೋಷಣೆ ಮಾಡಿದೆ.