ನವದೆಹಲಿ: ನಮ್ಮಲ್ಲಿ ಬಹುತೇಕ ಮಂದಿ ಎದುರಿಸುತ್ತಿರುವ ಪರಿಸ್ಥಿತಿಯನ್ನು ಅರ್ನೆಸ್ಟ್ ಅಂಡ್ ಯಂಗ್ ರಿಫೈನ್ ಸಮೀಕ್ಷೆ ತೆರೆದಿಟ್ಟಿದ್ದು, ಭಾರತದ ನೌಕರರ ಪೈಕಿ ಶೇ.80 ರಷ್ಟು ಮಂದಿಗೆ ಮಾಸಾಂತ್ಯಕ್ಕೂ ಮುನ್ನವೇ ವೇತನದ ಹಣ ಖಾಲಿಯಾಗಿರುತ್ತದೆ ಎಂದು ಹೇಳಿದೆ.
ಇದಿಷ್ಟೇ ಅಲ್ಲ, ಶೇ.34 ರಷ್ಟು ಮಂದಿಯ ವೇತನ ತಿಂಗಳ ಮಧ್ಯಭಾಗದಲ್ಲೇ ಖಾಲಿಯಾಗಿರುತ್ತದೆ ಎಂಬ ಆಘಾತಕಾರಿ ಅಂಶವೂ ಈ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದ್ದು ಯೋಗ್ಯ ಮೊತ್ತವನ್ನು ತಮ್ಮ ವೇತನದಿಂದ ಉಳಿತಾಯ ಮಾಡುವುದಕ್ಕೆ ಸಾಧ್ಯವಾಗುತ್ತಿರುವುದು ಶೇ.13 ರಷ್ಟು ಮಂದಿಗೆ ಮಾತ್ರವಷ್ಟೆ.
ಏರುತ್ತಲೇ ಇರುವ ಜೀವನ, ಜೀವನಶೈಲಿಯ ಖರ್ಚನ್ನು ಕಳೆದುಕೊಳ್ಳುವ ಭೀತಿ, ಹಣಕಾಸಿನ ಬಳಕೆಯ ಕಳಪೆ ಯೋಜನೆಗಳು, ಸಾಲದ ಸುಳಿಗಳಿಂದಾಗಿ ಉದ್ಯೋಗಿಗಳು ತಮ್ಮ ವೇತನದಲ್ಲಿ ಉಳಿತಾಯವೂ ಮಾಡಲು ಸಾಧ್ಯವಾಗದೇ ಮಾಸಾಂತ್ಯಕ್ಕೆ ಜೇಬು ಖಾಲಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು Wage Access in India: The final frontier of employee wellbeing ಎಂಬ ವರದಿಯಲ್ಲಿ ಉಲ್ಲೇಖಗೊಂಡಿದೆ.
ವೇತನ ಪಡೆಯುತ್ತಿರುವ 3,010 ಮಂದಿ ಭಾರತೀಯರಿಂದ ಸಮೀಕ್ಷೆಯ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದೆ. ಈ ಪ್ರಕಾರ ಶೇ.38 ರಷ್ಟು ಭಾರತೀಯರಷ್ಟೇ ತಮ್ಮ ಆರ್ಥಿಕ ಸುಸ್ಥಿತಿ ನಿಯಂತ್ರಣದಲ್ಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಡಿಮೆ ಆದಾಯ ಹೊಂದಿರುವ ಗುಂಪುಗಳಲ್ಲಿ ಆರ್ಥಿಕ ಒತ್ತಡ ನಿರ್ಬಂಧಿತವಾಗಿಲ್ಲ ಎಂಬುದು ಮತ್ತೊಂದು ಆಸಕ್ತಿದಾಯಕ ಅಂಶವಾಗಿದೆ.
ತಿಂಗಳಿಗೆ 1 ಲಕ್ಷಕ್ಕಿಂತಲೂ ಹೆಚ್ಚು ವೇತನ ಪಡೆಯುತ್ತಿರುವವರಿಗೆ ಈ ಮೊತ್ತದಿಂದ ತಮ್ಮ ಇಡೀ ತಿಂಗಳ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲವಂತೆ. ಅಂದಹಾಗೆ ತಿಂಗಳಿಗೆ ಹೆಚ್ಚು ವೇತನ ಪಡೆಯುವವರಿಗಿಂತ 15,000 ಅಥವಾ ಅದಕ್ಕಿಂತಲೂ ಕಡಿಮೆ ವೇತನ ಪಡೆಯುವವರೇ ಹೆಚ್ಚಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ.
"ಯಾರಿಗೆ ಸಾಲುತ್ತೆ ಈ ಸಂಬಳ" ಎನ್ನುತ್ತಿದ್ದಾರೆ ಶೇ.75 ರಷ್ಟು ಮಂದಿ!
ಶೇ.75 ರಷ್ಟು ಮಂದಿಗೆ ತಮಗೆ ಸಿಗುತ್ತಿರುವ ವೇತನ ಸಾಲುತ್ತಿಲ್ಲ ಎಂಬ ದೂರು ಇದ್ದೇ ಇದೆ. ಈ ರೀತಿಯ ಅಭಿಪ್ರಾಯ ಹೊಂದಿರುವವರು ಹೆಚ್ಚಿನ ಆದಾಯಕ್ಕಾಗಿ ಬೇರೆ ಮೂಲಗಳನ್ನು ಹುಡುಕುತ್ತಿದ್ದಾರಂತೆ!