ನವದೆಹಲಿ: ಕ್ರಿಯಾಶೀಲ ಆಡಳಿತಕ್ಕಾಗಿ, ಪ್ರಧಾನಿ ನರೇಂದ್ರ ಮೋದಿ ಅವರು, ಮಂತ್ರಿ ಪರಿಷತ್ ಅನ್ನು ಎಂಟು ಗುಂಪುಗಳಾಗಿ ವಿಂಗಡಿಸಿದ್ದಾರೆ.
ಯುವ ಸಿಬ್ಬಂದಿಗೆ ಉತ್ತೇಜನ ನೀಡುವುದರ ಜೊತೆಗೆ, ನಿವೃತ್ತಿಯಾಗುತ್ತಿರುವ ಅಧಿಕಾರಿಗಳಿಂದ ಸಲಹೆ ಪಡೆಯುವುದು ಹಾಗೂ ತಂತ್ರಜ್ಞಾನದ ಸಮರ್ಥ ಬಳಕೆ ಮಾಡಿಕೊಳ್ಳುವ ಮೂಲಕ ಆಡಳಿತ ಸುಧಾರಣೆಗೆ ಒತ್ತು ನೀಡಲು ಯೋಜಿಸಲಾಗಿದೆ.
77 ಸಚಿವರನ್ನು 8 ಗುಂಪುಗಳಾಗಿ ವಿಂಗಡಿಸಲಾಗಿದೆ. ಹಿರಿಯ ಸಚಿವರೊಬ್ಬರು ಆ ಗುಂಪಿನ ಸಂಯೋಜಕರಾಗಿರುತ್ತಾರೆ. ಎಲ್ಲ ಸಚಿವಾಲಯಗಳ ಕಚೇರಿಗಳಲ್ಲಿ ಹೆಚ್ಚಿನ ಪಾರದರ್ಶಕತೆ, ಸುಧಾರಣೆ ಹಾಗೂ ದಕ್ಷತೆ ತರುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಈ ಗುಂಪುಗಳ ಹೊಣೆ. ಅದಕ್ಕಾಗಿ ತಂತ್ರಜ್ಞಾನ ಆಧಾರಿತ ಸಂಪನ್ಮೂಲ, ತಮ್ಮ ತಂಡಕ್ಕೆ ಅಗತ್ಯವಾದ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ವೃತ್ತಿಪರರ ತಂಡ ರಚನೆ ಸೇರಿದಂತೆ ಹಲವು ಕ್ರಮಗಳನ್ನು ಅಳವಡಿಸಿಕೊಳ್ಳಲು ಯೋಜಿಸಲಾಗಿದೆ ಎಂದು ಹೇಳಲಾಗಿದೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಪರಿಷತ್‌ನ ಚಿಂತನಾ ಶಿಬಿರಗಳ ಸರಣಿ ಸಭೆಗಳ ನಂತರದಲ್ಲಿ, ಈ ರೀತಿಯ ಗುಂಪುಗಳನ್ನು ಮಾಡಲಾಗಿದೆ.
ವೈಯಕ್ತಿಕ ದಕ್ಷತೆ, ಯೋಜನೆಗಳ ಅನುಷ್ಠಾನದ ಮೇಲೆ ನಿಗಾ, ಸಚಿವಾಲಯದ ಕಾರ್ಯನಿರ್ವಹಣೆ- ಅಧಿಕಾರಿಗಳ ಪಾಲ್ಗೊಳ್ಳುವಿಕೆ, ಪಕ್ಷದ ಸಹಕಾರ ಮತ್ತು ಪರಿಣಾಮಕಾರಿ ಸಂವಹನ ಹಾಗೂ ಸಂಸದೀಯ ನಡಾವಳಿಗೆ ಸಂಬಂಧಿಸಿದಂತೆ ಒಟ್ಟು ಐದು ಸಭೆಗಳು ನಡೆದಿವೆ.
ಕೊನೆಯ ಚಿಂತನಾ ಶಿಬಿರದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ರಾಜ್ಯಸಭೆಯ ಸಭಾಪತಿ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಕೂಡ ಭಾಗವಹಿಸಿದ್ದರು.
ಪ್ರಮುಖವಾಗಿ ಮೋದಿ ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ದಕ್ಷತೆ ಹೆಚ್ಚಿಸುವ ಬಗ್ಗೆ, ಈ ಚಿಂತನಾ ಶಿಬಿರಗಳಲ್ಲಿನ ಚರ್ಚೆಗೆ ಆದ್ಯತೆ ನೀಡಲಾಗಿತ್ತು.
ಪ್ರತಿಯೊಂದು ಸಚಿವಾಲಯದ ಕಚೇರಿಯ ಪೋರ್ಟಲ್ ಅಭಿವೃದ್ಧಿಪಡಿಸಿ, ಆ ಮೂಲಕ ಕೇಂದ್ರ ಸರ್ಕಾರದ ಘೋಷಣೆಗಳು, ವಿವಿಧ ಯೋಜನೆಗಳ ಅನುಷ್ಠಾನದಲ್ಲಿನ ಪ್ರಗತಿ, ಹಾಗೂ ತಮ್ಮ ಗುಂಪಿಗೆ ನೀಡಲಾದ ಗುರಿ ಸಾಧಿಸುವುದಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡುತ್ತ ಹೋಗುವುದು ಈ ಗುಂಪುಗಳ ಕೆಲಸ.
ಸಂಶೋಧನೆ-ಸಂವಹನ ಹಾಗೂ ಇತರ ಕ್ಷೇತ್ರದಲ್ಲಿ ನುರಿತಂತಹ, ಕನಿಷ್ಠ ಮೂವರು ಯುವ ವೃತ್ತಿಪರರು ಇರುವಂತಹ ತಂಡವೊಂದನ್ನು ರೂಪಿಸುವ ಹೊಣೆಯನ್ನು ಒಂದು ಗುಂಪಿಗೆ ನೀಡಲಾಗಿದೆ. ನಿವೃತ್ತರಾಗುತ್ತಿರುವ ಉದ್ಯೋಗಿಗಳ ಅನುಭವ, ಪ್ರತಿಕ್ರಿಯೆಗಳನ್ನು ನಿರ್ವಹಿಸುವ ಪೋರ್ಟಲ್ ಸಿದ್ಧಪಡಿಸುವಂತೆ ಮತ್ತೊಂದು ಗುಂಪಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವರಾದ ಹರದೀಪ್ ಸಿಂಗ್ ಪುರಿ, ನರೇಂದ್ರ ಸಿಂಗ್ ತೋಮರ್, ಪೀಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಅವರೂ ಇಂತಹ ತಂಡಗಳ ಸಂಯೋಜಕರಾಗಿದ್ದಾರೆ.
ಈ ಹೊಣೆಯು ಅವರಿಗೆ, ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಹಾಗೂ ತಮ್ಮ ತಮ್ಮ ಸಚಿವಾಲಯಗಳ ಕಚೇರಿಗಳಲ್ಲಿ ಉತ್ತಮ ಕಾರ್ಯಶೈಲಿಯನ್ನು ರೂಢಿಸಿಕೊಳ್ಳಲು ನೆರವಾಗಲಿದೆ ಎನ್ನಲಾಗಿದೆ.