ಹೈದರಾಬಾದ್: ತೆಲಂಗಾಣದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಪಿ. ವೈಷ್ಣವಿ ಎಂಬಾಕೆ ಕೊರೊನಾ ಸಂಬಂಧ ಸ್ಥಗಿತಗೊಂಡಿರುವ ತನ್ನ ಗ್ರಾಮಕ್ಕೆ ಬಸ್ ಸೇವೆಯನ್ನು ಮತ್ತೆ ಆರಂಭಿಸಬೇಕೆಂದು ಸಹಾಯ ಕೋರಿ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ ಪತ್ರ ಬರೆದಿದ್ದು, ಇದಕ್ಕೆ ಸ್ಪಂಧಿಸಿರುವ ನ್ಯಾಯಮೂರ್ತಿಗಳು ಆ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.
ಬಸ್ ವ್ಯವಸ್ಥೆಯಿಲ್ಲದ ಕಾರಣ ಶಾಲೆ ಮತ್ತು ಕಾಲೇಜಿಗೆ ಹೋಗಲು ತೊಂದರೆಯಾಗಿದೆ ಎಂದು ಆಕೆ ಪತ್ರದಲ್ಲಿ ಉಲ್ಲೇಖಿಸಿದ್ದಳು. ಕೊರೊನಾದಿಂದ ನನ್ನ ತಂದೆ ಸಾವಿಗೀಡಾಗಿದ್ದು, ಅಂದಿನಿಂದಲೂ ನನ್ನ ತಾಯಿಯೇ ನೋಡಿಕೊಳ್ಳುತ್ತಿದ್ದಾಳೆ. ನಾವು ಶಾಲೆಗೆ ಹೋಗಬೇಕೆಂದರೆ ದಿನಕ್ಕೆ ಆಟೋಗೆ 150 ರೂ. ಬೇಕು. ಕಾಲೇಜಿಗೆ ನಮ್ಮ ಊರಿನಿಂದ 18 ಕಿ.ಮೀ. ಆಗುತ್ತದೆ. ನಮ್ಮೂರಿನ ಬಹುತೇಕ ಮಕ್ಕಳು ಇದೇ ಕಾರಣಕ್ಕೆ ಶಾಲೆ- ಕಾಲೇಜಿಗೆ ಹೋಗದೆ ಮನೆಯಲ್ಲೇ ಉಳಿದಿದ್ದಾರೆ ಎಂದು ಆಕೆ ಬರೆದಿದ್ದಳು.
ಈ ಬಗ್ಗೆ ಸಿಜೆಐ ಎನ್.ವಿ ರಮಣ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ಪತ್ರ ಕಳುಹಿಸಿದ್ದು, ರಂಗಾರೆಡ್ಡಿ ಜಿಲ್ಲೆಯ ಗ್ರಾಮಕ್ಕೆ ಬಸ್ ಸೇವೆಯನ್ನು ಪುನಃ ಸ್ಥಾಪಿಸಲಾಗಿದೆ ಎಂದು ಟಿಎಸ್‌ಆರ್‌ಟಿಸಿ ತಿಳಿಸಿದೆ.