ನವದೆಹಲಿ: ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಭಾರತದ ಹಲವೆಡೆ ಬೀಳುತ್ತಿರುವ ಭಾರೀ ಮಳೆಗೆ ಆರ್ಕ್ ಟಿಕ್ ಪ್ರದೇಶದ ಬೆಳವಣಿಗೆ ಕಾರಣವಿರಬಹುದು ಎಂದು ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿ ಈ ಬಗ್ಗೆ ಬೆಳಕು ಚೆಲ್ಲಿದೆ. ನೇಚರ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಈ ಅಧ್ಯಯನದಲ್ಲಿ ಭಾರತೀಯ ಹಾಗೂ ನಾರ್ವೆ ವಿಜ್ಞಾನಿಗಳು ಭಾಗ. ವಹಿಸಿದ್ದರು.
ಉತ್ತರ ಧ್ರುವ ಪ್ರದೇಶವಾದ ಆರ್ಕ್ ಟಿಕ್ ನಲ್ಲಿ ಮಂಜುಗಡ್ಡೆ ಅತಿ ವೇಗವಾಗಿ ಕರಗುತ್ತಿರುವುದೇ ಭಾರತದಲ್ಲಿನ ಅತಿವೃಷ್ಟಿಗೆ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಬಟರ್ ಫ್ಲೈ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಭೂಮಂಡಲದ ಯಾವುದೋ ದೂರದಲ್ಲಿ, ಖಂಡಗಳಾಚೆಗೆ ಉಂಟಾಗುವ ಬೆಳವಣಿಗೆಯಿಂದಾಗಿ ಇನ್ನೆಲ್ಲೋ ಅದರ ಪರಿಣಾಮ ಉಂಟಾಗುವುದನ್ನು ಬಟರ್ ಫ್ಲೈ ಎಫೆಕ್ಟ್ ಎನ್ನಲಾಗುತ್ತದೆ.
ಈ ಬಾರಿ ಅತ್ಯಧಿಕ ಪ್ರಮಾನದಲ್ಲಿ ಮಂಜುಗಡ್ಡೆ ಕರಗಿ ಸಮುದ್ರ ಸೇರಿದ್ದರಿಂದಾಗಿ ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ತೇವಾಂಶ ಹೆಚ್ಚಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿಯೂ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.
ಮುಂದಿನ ದಿನಗಳ ಸಮುದ್ರ ಮತ್ತು ಮಂಜುಗಡ್ಡೆಯ ಪ್ರಮಾಣದ ನಡುವಿನ ಅನುಪಾತವನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸುವ ಅಗತ್ಯವನ್ನು ವಿಜ್ಞಾನಿಗಳು ಒತ್ತಿ ಹೇಳಿದ್ದಾರೆ.